ಜಿಲ್ಲೆ

ಪಿಜಿ ಪರೀಕ್ಷೆ ಮುಂದೂಡಿಕೆಗೆ ವಿದ್ಯಾರ್ಥಿಗಳ ಆಗ್ರಹ

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂದೂಡಬೇಕೆಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ಯಿಂದ ಸೋಮವಾರ ಪ್ರತಿಭಟನೆ ನಡೆಯಿತು.
ಮಾನಸಗಂಗೋತ್ರಿಯ ಕುವೆಂಪು ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ವಿಭಾಗದ ತರಗತಿಗಳು ಅ.31ರಂದು ಮುಗಿದಿದ್ದು, ನ.3ರಿಂದಲೇ ಪರೀಕ್ಷೆ ಪ್ರಾರಂಭಿಸುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಸಮಯ ಸಿಗದೆ ಕಷ್ಟವಾಗುತ್ತಿದೆ. ಆದ್ದರಿಂದ ವಿಜ್ಞಾನ ವಿಭಾಗದ ಸ್ನಾತಕೋತ್ತರ ಪದವಿ ಪರೀಕ್ಷೆಗೆ ಸಮಯಾವಕಾಶ ನೀಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಕಾರ್ಯಸೌಧದವರೆಗೆ ಮೆರವಣಿಗೆ ಬಂದು ಪರೀಕ್ಷೆ ಮುಂದೂಡಿ ಅನುಕೂಲ ಮಾಡಿಕೊಡುವಂತೆ ಪರೀಕ್ಷಾಂಗ ಕುಲಸಚಿವ ಜ್ಞಾನಪ್ರಕಾಶ್ ಅವರಿಗೆ ಮನವಿ ಸಲ್ಲಿಸಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಎಬಿವಿಪಿ ರಾಜ್ಯ ಕಾರ‌್ಯಕಾರಿಣಿ ಸದಸ್ಯ ಶ್ರೇಯಸ್, ನಮೀತಾ, ಜಿಲ್ಲಾ ಸಂಚಾಲಕ ಶಿವು, ನಗರ ಕಾರ್ಯದರ್ಶಿ ಪ್ರಜ್ವಲ್, ಕಾರ್ಯಕಾರಿಣಿ ಸದಸ್ಯ ಆಕಾಶ್ ಇತರರು ಇದ್ದರು.