ಚಿಕ್ಕಬಳ್ಳಾಪುರ: ಕರೊನಾ ಸೃಷ್ಟಿಸಿದ ಅವಾಂತರಗಳು ಒಂದೇ ಎರಡೇ, ಇದರ ನಡುವೆಯೂ ಸಕಾರಾತ್ಮಕ ಅಂಶವೊಂದು ಮೌನವಾಗಿಯೇ ಸದ್ದುಮಾಡುತ್ತಿದೆ, ಗಣೇಶ ಹಬ್ಬದಂದು ಪಿಒಪಿ ಮೂರ್ತಿಗಳ ಬದಲಿಗೆ ಪರಿಸರಸ್ನೇಹಿ ಮಣ್ಣಿನ, ಅರಿಶಿಣ ಮೂರ್ತಿಗಳ ಪ್ರತಿಷ್ಠಾಪನೆಯತ್ತ ಒಲವು ಮೂಡಲು ಕಾರಣವಾಗಿದೆ!
ಪ್ರತಿ ವರ್ಷ ಗಣೇಶನ ಹಬ್ಬಕ್ಕೆ ತಿಂಗಳಿಗೂ ಮೊದಲೇ ಮಾರುಕಟ್ಟೆಗೆ ಪಿಒಪಿ (ಪ್ಲ್ಯಾಸ್ಟರ್ ಆ್ ಪ್ಯಾರಿಸ್)ಯ ಬಗೆಬಗೆಯ ಮೂರ್ತಿಗಳು ಲಗ್ಗೆಯಿಡುತ್ತಿದ್ದವು. ಆದರೆ, ಈ ಬಾರಿ ಗಜಾನನ ಆರಾಧನೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇದ್ದರೂ ಎಲ್ಲೂ ದೊಡ್ಡ ದೊಡ್ಡ ಮೂರ್ತಿಗಳೇ ಕಂಡು ಬರುತ್ತಿಲ್ಲ.
ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮೂರ್ತಿಗಳ ಪ್ರತಿಷ್ಠಾಪನೆಯನ್ನು ಜಿಲ್ಲಾಡಳಿತ ನಿಷೇಧಿಸಿದೆ, ಮನೆಗಳಲ್ಲಿಯೇ ಪರಿಸರಸ್ನೇಹಿ ಅರಿಶಿಣ, ರಾಗಿ ಇಲ್ಲವೇ ರಾಸಾಯನಿಕ ಬಣ್ಣವಿಲ್ಲದ ಮಣ್ಣಿನಿಂದ ಚಿಕ್ಕ ಮೂರ್ತಿಗಳನ್ನು ತಯಾರಿಸಿ ಪ್ರತಿಷ್ಠಾಪಿಸಿ ಪೂಜಿಸಲು, ಮನೆಯಲ್ಲಿನ ತೊಟ್ಟಿ ಇಲ್ಲವೇ ಡ್ರಮ್‌ಗಳಲ್ಲಿ ವಿಸರ್ಜಿಸಲು ಸೂಚಿಸಿರುವುದು ಪರಿಸರಕ್ಕೆ ಮಾರಕವಾದ ಪಿಒಪಿ ಮೂರ್ತಿಗಳಿಗೆ ಸಂಪೂರ್ಣವಾಗಿ ಕಡಿವಾಣ ಬಿದ್ದಿದೆ.
ಪರಿಸರಸ್ನೇಹಿ ಆಚರಣೆ ಜಾಗೃತಿ: ಪ್ರತಿ ವರ್ಷ ಜಿಲ್ಲಾಡಳಿತ, ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಮತ್ತು ಸ್ಥಳೀಯ ಆಡಳಿತ ಪ್ಲ್ಯಾಸ್ಟರ್ ಆಫ್ ಪ್ಯಾರಿಸ್, ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಮೂರ್ತಿಗಳನ್ನು ಪ್ರತಿಷ್ಠಾಪಿಸದಂತೆ ಅರಿವು ಮೂಡಿಸಿದರೂ ಪಿಒಪಿ ಮೂರ್ತಿಗಳ ಪ್ರತಿಪ್ಠಾಪನೆ ಹಾಗೂ ಕೆರೆ-ಕುಂಟೆಗಳಿಗೆ ವಿಸರ್ಜಿಸಲಾಗುತ್ತಿತ್ತು. ಕಲುಷಿತಗೊಂಡ ಈ ನೀರು ಸೇವಿಸಿದ ರಾಸುಗಳ ಸಾವು, ಜನರಲ್ಲಿ ಅಲರ್ಜಿ ಸೇರಿ ಹಲವು ಸಮಸ್ಯೆಗಳು ಕಂಡು ಬರುತ್ತಿದ್ದವು. ಆದರೆ, ಇದಕ್ಕೆ ಈ ಬಾರಿ ಕಡಿವಾಣ ಬಿದ್ದಿದೆ. ಕರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಕೆರೆಗಳಲ್ಲಿ ವಿಸರ್ಜನೆಯನ್ನೇ ನಿಷೇಧಿಸಲಾಗಿದೆ, ಅನಿವಾರ್ಯವಾಗಿ ಜನರು ಚಿಕ್ಕ ಮೂರ್ತಿಗಳ ಆರಾಧನೆಗೆ ತೃಪ್ತಿಪಡುವಂತಾಗಿದೆ.
ಮಾರಾಟಗಾರರಿಗೆ ನಷ್ಟ: ದೊಡ್ಡ ಮೂರ್ತಿಗಳಿಗೆ ಬೇಡಿಕೆ ಇಲ್ಲದ ಹಿನ್ನೆಲೆಯಲ್ಲಿ ತಯಾರಿಕೆಯು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕನಿಷ್ಠ 1ರಿಂದ ಗರಿಷ್ಠ 2 ಅಡಿ ಮೂರ್ತಿಗಳನ್ನು ಮಾರಾಟಕ್ಕಿಡಲಾಗುತ್ತಿದೆ, ಆದರೂ ಇವುಗಳ ಹೆಚ್ಚಿನ ವ್ಯಾಪಾರದ ನಿರೀಕ್ಷೆ ಇಲ್ಲ. ಒಂದರ ಬೆಲೆ 350 ರೂ.ದಾಟುವುದಿಲ್ಲ. ಇದರಿಂದ ಹೆಚ್ಚಿನ ನಿರ್ವಹಣೆಗೆ ಕಡಿಮೆ ಲಾಭ ದೊರೆಯುತ್ತಿದ್ದು, ವರ್ಷದ ಸಂಪಾದನೆಯನ್ನೇ ಎದುರು ನೋಡುತ್ತಿದ್ದ ಮೂರ್ತಿ ತಯಾರಕರು, ಮಾರಾಟಗಾರರಿಗೆ ದುಡಿಮೆಯೇ ಇಲ್ಲದಾಗಿದೆ.
ವಿವಿಧ ಸಮಿತಿಗಳ ಚರ್ಚೆ: ಹಲವು ದಶಕಗಳಿಂದಲೂ ತಪ್ಪದೇ ಪ್ರತಿ ವರ್ಷ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿರುವ ದೇವಾಲಯ ಸಮಿತಿಗಳು ಹಬ್ಬದ ವಿಚಾರದಲ್ಲಿ ಗೊಂದಲಕ್ಕೀಡಾಗಿವೆ. ಅನೌಪಚಾರಿಕವಾಗಿ ಚರ್ಚಿಸಲಾಗುತ್ತಿದೆ. ತ್ವರಿತವಾಗಿ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯುವ ನಿರೀಕ್ಷೆಯಲ್ಲಿದ್ದಾರೆ. ಪ್ರಸ್ತುತ ಸಾಂಕೇತಿಕವಾಗಿ ಚಿಕ್ಕ ಮೂರ್ತಿ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಲಾಗುತ್ತದೆ. ಸಾರ್ವಜನಿಕ ವೀಕ್ಷಣೆ, ಪ್ರಸಾದ ವಿತರಣೆಗೆ ಅವಕಾಶವಿರುವುದಿಲ್ಲ. ಹಾಗೆಯೇ ಒಂದೇ ದಿನಕ್ಕೆ ಸಂಭ್ರಮ ಸೀಮಿತವಾಗಿರುತ್ತದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಕರೊನಾ ಸೋಂಕು ವ್ಯಾಪವಾಗಿ ಹರಡುತ್ತಿರುವುದರಿಂದ ಸಾರ್ವಜನಿಕ ಸ್ಥಳಗಳ ಬದಲಿಗೆ ಮನೆಗಳಲ್ಲಿಯೇ ಪರಿಸರ ಸ್ನೇಹಿ ಅರಿಶಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಬೇಕು. ಆರ್.ಲತಾ, ಜಿಲ್ಲಾಧಿಕಾರಿ ದೊಡ್ಡ ಗಣಪತಿ ಮೂರ್ತಿ ತಯಾರಿಕೆ, ಮಾರಾಟವೂ ಇಲ್ಲ. ಚಿಕ್ಕ ಚಿಕ್ಕ ಮೂರ್ತಿಗಳಿವೆ. ಆದರೆ, ಹೆಚ್ಚಿನ ಮಾರಾಟದ ನಿರೀಕ್ಷೆ ಇಲ್ಲ. ಕುಮಾರ್, ಮೂರ್ತಿ ಮಾರಾಟಗಾರ