ಹಾಸನ: ಜಿಲ್ಲಾದ್ಯಂತ ಪಿಒಪಿ ಗೌರಿ- ಗಣಪತಿ ವಿಗ್ರಹಗಳ ತಯಾರಿಕೆ ಮತ್ತು ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಜತೆಗೆ ಕೇವಲ ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಬಳಸುವಂತೆ ಜಾಗೃತಿ ಮೂಡಿಸಲು ಅಪರ ಜಿಲ್ಲಾಧಿಕಾರಿ ಶಾಂತಲಾ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನೂರಕ್ಕೆ ನೂರರಷ್ಟು ಪಿಒಪಿ ಗಣಪತಿ ವಿಗ್ರಹಗಳ ಬಳಸದಂತೆ ಎಚ್ಚರವಹಿಸಬೇಕು. ಮಣ್ಣಿನಿಂದ ತಯಾರಿಸಿದ ಗೌರಿ- ಗಣೇಶನ ವಿಗ್ರಹ ಬಳಸುವಂತೆ ಶಾಲಾ ಶಿಕ್ಷಣ ಇಲಾಖೆ ಹಾಗೂ ಪದವಿಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ವತಿಯಿಂದ ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸಬೇಕು ಹಾಗೂ ಪರಿಸರ ಸ್ನೇಹಿ ಗಣೇಶ ಬಳಸಲು ಮಕ್ಕಳಲ್ಲಿ ವಿಶೇಷ ಚಿತ್ರಕಲೆ, ವಿಗ್ರಹ ತಯಾರಿಕೆ ಸ್ಪರ್ಧೆಗಳನ್ನೂ ಏರ್ಪಡಿಸುವಂತೆ ತಿಳಿಸಿದರು.
ಬೇರೆ ಜಿಲ್ಲೆಗಳಿಂದ ಜಿಲ್ಲೆಗೆ ಪಿಒಪಿ ಗಣಪತಿ ವಿಗ್ರಹಗಳು ಸರಬರಾಜು ಆಗುತ್ತಿವೆ ಎಂಬ ಮಾಹಿತಿ ಇದೆ. ಆದ್ದರಿಂದ ಪೊಲೀಸ್ ಇಲಾಖೆ, ಪರಿಸರ ಇಲಾಖೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ವಾಣಿಜ್ಯ ತೆರಿಗೆ ಇಲಾಖೆಯ ವತಿಯಿಂದ ಕಟ್ಟುನಿಟ್ಟಾಗಿ ಪಿಒಪಿ ವಿಗ್ರಹಗಳ ಸರಬರಾಜು ತಡೆಗಟ್ಟಬೇಕು ಎಂದು ಅವರು ಸೂಚಿಸಿದರು.
ಸಂಘ- ಸಂಸ್ಥೆಗಳು ಪಿಒಪಿ ಗಣಪತಿ ವಿಗ್ರಹಗಳ ಬಳಸದಂತೆ ತಿಳಿಸಬೇಕು. ಸ್ಥಳೀಯ ಸಂಸ್ಥೆಗಳಿಂದ ಕಸ ಸಂಗ್ರಹ ವಾಹನಗಳಲ್ಲಿ ಧ್ವನಿವರ್ಧಕದ ಮೂಲಕ ಈ ಬಗ್ಗೆ ಪ್ರಚಾರ ಮಾಡುವಂತೆ ಹಾಗೂ ಬಸ್ ನಿಲ್ದಾಣಗಳಲ್ಲಿ ಮೈಕ್‌ಗಳಲ್ಲಿ ಪ್ರಚಾರಗೊಳಿಸಬೇಕು. ಹಾಗೂ ಪಿಒಪಿ ಗೌರಿ- ಗಣೇಶ ವಿಗ್ರಹಗಳ ಮಾರಾಟ ಹಾಗೂ ತಯಾರಿಸುವುದನ್ನು ನಿಷೇಧಿಸಲಾಗಿದೆ ಎಂಬುದರ ಬಗ್ಗೆ ಸ್ಥಳೀಯ ಕೇಬಲ್ ಟಿವಿ ಹಾಗೂ ಪತ್ರಿಕೆಗಳಲ್ಲಿ ಹೆಚ್ಚಿನ ಪ್ರಚಾರ ನೀಡುವಂತೆ ತಿಳಿಸಿದರು.
ಪಿಒಪಿ ಗಣಪತಿ ವಿಗ್ರಹಗಳ ಮಾರಾಟ ಹಾಗೂ ತಯಾರಿಸುವುದು ಕಂಡು ಬಂದರೆ ಸೆಕ್ಷನ್ 33ಎ 1974 ಅಡಿ ಪ್ರಕರಣ ದಾಖಲಿಸುವಂತೆ ಹಾಗೂ ಅನಧಿಕೃತವಾಗಿ ಬ್ಯಾನರ್ ಹಾಕುವುದನ್ನು ತಡೆಯಬೇಕು. ವಿಗ್ರಹಗಳನ್ನು ಯಾವುದೇ ಜಲ ಮೂಲಗಳಿಗೆ ವಿಸರ್ಜಿಸದಂತೆ ಕೃತಕ ಜಲ ಮೂಲಗಳನ್ನು ನಿರ್ಮಿಸಿ ನಿರ್ದಿಷ್ಟ ಸ್ಥಳದಲ್ಲಿ ವಿಸರ್ಜಿಸಲು ಅರಿವು ಮೂಡಿಸಲು ಕ್ರಮ ವಹಿಸಬೇಕು ಎಂದರು.
ಪರಿಸರ ಅಧಿಕಾರಿ ಕೆ. ಕೀರ್ತಿ ಕುಮಾರ್ ಮಾತನಾಡಿ, ಪಿಒಪಿ ಗಣಪತಿ ವಿಗ್ರಹಗಳ ಬಳಸದಂತೆ ತಡೆಗಟ್ಟುವುದು ಎಲ್ಲರ ಜವಾಬ್ದಾರಿ ಆಗಿದೆ. ಪಿಒಪಿ ಗಣಪತಿ ವಿಗ್ರಹಗಳ ತಯಾರಿಕೆ ಜಿಲ್ಲೆಯಲ್ಲಿ ಈವರೆಗೂ ಕಂಡು ಬಂದಿಲ್ಲ. ಆದರೆ ಬೇರೆ ಜಿಲ್ಲೆಯಿಂದ ಸರಬರಾಜು ಆಗುವುದನ್ನು ತಡೆಯಲು ಎಲ್ಲಾ ಇಲಾಖೆಗಳು ಸಹಕರಿಸಬೇಕು. ಪ್ರಾದೇಶಿಕ ಸಾರಿಗೆ ಅಧಿಕಾರಿ, ಪೋಲೀಸ್ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆಯ ವತಿಯಿಂದ ಎಲ್ಲ ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಿ ಪಿಒಪಿ ಗಣೇಶ ಮೂರ್ತಿಗಳು ಕಂಡುಬಂದಲ್ಲಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ವಿಡಿಯೋ ಸಂವಾದದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಜಿಲ್ಲಾ ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ.ಜಗದೀಶ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜವರೇಗೌಡ ಹಾಗೂ ಮತ್ತಿತ್ತರು ಉಪಸ್ಥಿತರಿದ್ದರು.