ಶಿಡ್ಲಘಟ್ಟ : ತಾಪಂ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನೌಕರರ ಸಂಬಳದಿಂದ ಕಡಿತಗೊಳಿಸುವ ಪಿಎಫ್ ಹಣವನ್ನು ಏಜೆನ್ಸಿಯವರು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ತಾಪಂ ಅಧ್ಯಕ್ಷ ಎಂ.ಕೆ.ರಾಜಶೇಖರ್ ಹೇಳಿದರು.
ತಾಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಕೆಲ ವರ್ಷಗಳಿಂದ ತಾಪಂ ಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರ ಸಂಬಳದಲ್ಲಿ ಪಿಎಫ್ ಗಾಗಿ ಹಣ ಕಡಿತಗೊಳಿಸುತ್ತಿದ್ದು ಸಂಬಂದಪಟ್ಟ ಏಜೆನ್ಸಿಯವರು ಪಿಎಫ್ ಪಾವತಿಸಿಲ್ಲ. ಈ ಬಗ್ಗೆ ತಾಪಂ ಇಒ ಏನು ಕ್ರಮ ಕೈಗೊಂಡಿದ್ದೀರಿ ಎಂದು ತಾಪಂ ಸದಸ್ಯ ಕೆ.ಲಕ್ಷ್ಮಿನಾರಾಯಣ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಇಒ ಬಿ.ಶಿವಕುಮಾರ್, ನೌಕರರಿಗೆ ಸಂಬಳವನ್ನು ಏಜೆನ್ಸಿ ಮೂಲಕ ನೀಡುವುದರಿಂದ ಸಂಬಂಧಿಸಿದ ನೌಕರರು ಏಜೆನ್ಸಿ ವಿರುದ್ಧ ಪ್ರಕರಣ ದಾಖಲಿಸಬೇಕೆ ಹೊರತು ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದರು.ಇದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಮಧ್ಯ ಪ್ರವೇಶಿಸಿದ ಅಧ್ಯಕ್ಷರು ಸಂಬಂಧಪಟ್ಟ ನೌಕರರು ಲಿಖಿತವಾಗಿ ತಾಪಂ ಮನವಿ ನೀಡಿದರೆ ಸಂಬಂಧಪಟ್ಟ ಏಜೆನ್ಸಿಯವರನ್ನು ಕರೆಸಿ ಮಾತನಾಡಿ ಸಮಸ್ಯೆ ಸರಿಪಡಿಸಲಾಗುವುದು. ಒಂದು ವೇಳೆ ಮಾತುಕತೆಯಲ್ಲಿ ಬಗೆಹರಿಯದಿದ್ದಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಮುಂದಾಗುವ ಬಗ್ಗೆ ಯೋಚಿಸೋಣ ಎಂದರು.
ಜೂ 5 ರಂದು ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ತಾಪಂ ಸದಸ್ಯರನ್ನು ಕಡೆಗಣಿಸಿದ್ದರ ಬಗ್ಗೆ ಬಹುತೇಕ ಸದಸ್ಯರು ಇಒ ವಿರುದ್ಧ ಹರಿಹಾಯ್ದರು. ಕಾರ್ಯಕ್ರಮಕ್ಕೆ ತಾಪಂ ಸದಸ್ಯರನ್ನೇ ಕಡೆಗಣಿಸಿದ್ದರ ಹಿಂದೆ ಇಒ ಕೈವಾಡವಿದೆ. ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೇ ಕಾರ್ಯಕ್ರಮದ ರೂಪುರೇಷೆ ನಿರ್ಧರಿಸುವುದಾದರೆ ಜನಪ್ರತಿನಿಧಿಗಳ ಅಗತ್ಯ ಇಲ್ಲವೇ? ಎಂದು ಪ್ರಶ್ನಿಸಿದರು.
ತಾಲೂಕು ಪಂಚಾಯಿತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಇಒ ನಿರ್ಲಕ್ಷ್ಯವಹಿಸುವ ಜತೆಗೆ ಕ್ಷೇತ್ರದಾಧ್ಯಂತ ವಿವಿಧ ಕಾಮಗಾರಿಗಳ ಪರಿಶೀಲನೆಗೆ ಹೋದಾಗ ಸ್ಥಳೀಯ ತಾಪಂ ಸದಸ್ಯರ ಗಮನಕ್ಕೆ ತರದೇ ಅವಮಾನ ಮಾಡುತ್ತಿದ್ದಾರೆ. ಇವರ ಈ ವರ್ತನೆ ನೋಡಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಸಹ ತಾಪಂ ಸದಸ್ಯರ ಗಮನಕ್ಕೆ ಯಾವುದೇ ಕಾಮಗಾರಿಯ ಮಾಹಿತಿ ನೀಡುತ್ತಿಲ್ಲ. ಕೆಲ ಪಿಡಿಒಗಳು ತಾವು ಮಾಡುವ ಕೆಲಸ ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ. ಸುಮಾರು ವರ್ಷಗಳಿಂದ ತಾಲೂಕಿನಲ್ಲಿ ಕೆಲಸ ಮಾಡುತ್ತಿರುವ ಪಿಡಿಒಗಳನ್ನು ವರ್ಗಾವಣೆ ಮಾಡಲು ಮೇಲಧಿಕಾರಿಗಳಿಗೆ ಶಿಫಾರಸು ಮಾಡಿ ಎಂದು ಒತ್ತಾಯಿಸಿದರು.
ತಾಪಂ ಉಪಾಧ್ಯಕ್ಷೆ ಮುನಿನರಸಮ್ಮ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಶಶಿಕುಮಾರ್, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ ಹಾಗೂ ತಾಪಂ ಸದಸ್ಯರಿದ್ದರು.