ಜಿಲ್ಲೆ

ಪಿಎಸಿಎಲ್ ಗ್ರಾಹಕರು ಹಾಗು ಏಜೆಂಟರ್ ಪ್ರತಿಭಟನೆ

ಹಾಸನ: ಪಿಎಸಿಎಲ್‌ನಲ್ಲಿ ಹಣ ಹೊಡಿಕೆ ಮಾಡಿದ್ದು, ಆ ಹಣವನ್ನು ಇದುವರೆಗೂ ಗ್ರಾಹಕರಿಗೆ ನೀಡಿಲ್ಲ. ಕೂಡಲೇ ವಾಪಾಸ್ ನೀಡುವಂತೆ ಆಗ್ರಹಿಸಿ ಪಿಎಸಿಎಲ್ ಗ್ರಾಹಕರು ಹಾಗು ಏಜೆಂಟರ್ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪಿಎಸಿಎಲ್ ಭಾರತದಲ್ಲಿ ಸುಮಾರು 45 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು, ಈ ಕಂಪನಿಗೆ ದೇಶದಾದ್ಯಂತ ಕೋಟ್ಯಂತರ ಗ್ರಾಹಕರು ಹಣ ಹೂಡಿಕೆ ಮಾಡಿದ್ದಾರೆ. ಈ ವರೆವಿಗೂ ಹಣವನ್ನು ಗ್ರಾಹಕರಿಗೆ ಹಿಂತಿರುಗಿಸಿಲ್ಲ. ಇದರ ಬಗ್ಗೆ ಸುಪ್ರೀಂ ಕೋರ್ಟ್ 2014 ರಲ್ಲೇ ಲೋಧಾ ವರದಿಯಂತೆ ಆರು ತಿಂಗಳಲ್ಲಿ ಹಣ ಹಿಂತಿರುಗಿಸಬೇಕೆಂದು ಆದೇಶ ಮಾಡಿದೆ. ಆದರೆ, ಇಲ್ಲಿಯವರೆಗೂ ಲೋಧಾ ಕಮಿಟಿ ಮತ್ತು ಸೆಬಿ ಸಂಸ್ಥೆಯು ಗ್ರಾಹಕರಿಗೆ ಹಣ ವಾಪಸ್ ಮಾಡಿಲ್ಲ ಎಂದು ದೂರಿದರು.

ಕರ್ನಾಟಕ ರಾಜ್ಯದಲ್ಲಿ ಅಂದಾಜು 4 ಸಾವಿರ ಕೋಟಿ ರೂ. ಹಣವನ್ನು ಗ್ರಾಹಕರಿಗೆ ನೀಡಬೇಕಾಗಿದೆ. ನಮ್ಮ ಆಸ್ತಿಗಳು ಬೇರೆಯವರಿಗೆ ಪರಭಾರೆ ಆಗುತ್ತಿದ್ದು, ಆಸ್ತಿ ಭೂಗಳ್ಳರ ಪಾಲಾಗುತ್ತಿದೆ. ಇದನ್ನು ಮನಗಂಡ ಬಡ್ಸ್ ಕಾಯ್ದೆ 2019 ರ ಅಡಿಯಲ್ಲಿ ಮುಳುಗಿದ ಮೊತ್ತವನ್ನು ಮರಳಿ ಪಡೆಯಲು ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಲಿಂಗೇಶ್, ಸವಿತಾ, ಮಹದೇವ್, ಕುಮಾರ್, ರೂಪಾ, ಪಾರ್ಥಸಾರಥಿ, ರಂಗೇಗೌಡ ಸೇರಿದಂತೆ ಇತರರು ಇದ್ದರು.