ಜಿಲ್ಲೆ

ಪಿಎಲ್‌ಡಿ ಬ್ಯಾಂಕ್‌ಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಚಿತ್ರದುರ್ಗ: ಚಿತ್ರದುರ್ಗ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ(ಪಿಎಲ್ಡಿ)ಬ್ಯಾಂಕ್ ನೂತನ ಅಧ್ಯಕ್ಷರಾಗಿ ಪಿ.ಜೆ.ಶಿವಪ್ರಸಾದ್ ಹಾಗೂ ಉಪಾಧ್ಯಕ್ಷರಾಗಿ ಎಂ.ಎನ್.ಶರಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶುಕ್ರವಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಯಿತು. ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕಟವಾಗುತ್ತಿದ್ದಂತೆ ಬ್ಯಾಂಕ್ ಬಳಿ ಅಭಿಮಾನಿಗಳು, ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಪ್ರಸಾದ್, ಸದಸ್ಯತ್ವವಿರುವ ತಾಲೂಕಿನ ರೈತರಿಗೆ ಬ್ಯಾಂಕ್ ಮೂಲಕ ಸಿಗಬಹುದಾದ ವಿವಿಧ ಬಗೆಯ ಸಾಲ, ಸವಲತ್ತುಗಳು ತಲುಪಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು. ಆಡಳಿತ ಮಂಡಳಿ ಎಲ್ಲ ನಿರ್ದೇಶಕರ ಮತ್ತು ಹಿರಿಯ ಸಹಕಾರಿಗಳ ಸಲಹೆ, ಮಾರ್ಗದರ್ಶನ ಪಡೆದು ಬ್ಯಾಂಕ್‌ನ ಅಭಿವೃದ್ಧಿಗೆ ಕ್ರಮವಹಿಸುವುದಾಗಿ ಹೇಳಿದರು.

ನಿರ್ದೇಶಕರಾದ ಜೆ.ಶಿವಪ್ರಕಾಶ್, ಕೆ.ಆರ್.ರವಿ, ಪಿ.ಎಸ್.ಜಗದೀಶ್, ಎನ್.ಎಸ್.ಮಾರುತಿ, ವನಜಾಕ್ಷಮ್ಮ, ಎಚ್.ಸಿ.ವಿಜಯಕುಮಾರ್, ಮಣ್ಣೇರು ನಾಗಪ್ಪ, ಕೆ.ಸಿ.ಮೌನೇಶ್, ಕೆ.ಎಸ್.ಸತೀಶ್, ಎನ್.ಆರ್.ಕೊಟ್ರೇಶ್, ಪದ್ಮಾ, ಕೆ.ಜೆ.ಸುನೀಲ್ ಇದ್ದರು.

---