ಹಾಸನ: ಪಿಎಫ್‌ಐ ಮತ್ತಿತರ ಸಂಘಟನೆಗಳನ್ನು 5 ವರ್ಷಗಳ ಕಾಲ ನಿಷೇಧಿಸಿರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮರುಪರಿಶೀಲಿಸಬೇಕು. ಈ ಸಂಬಂಧ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಜೆಡಿಎಸ್‌ನ ಸಂಸದ ಪ್ರಜ್ವಲ್ ರೇವಣ್ಣ ಮನವಿ ಮಾಡಿದರು.
ನಗರದ ಜವೇನಹಳ್ಳಿ ಮಠಕ್ಕೆ ಶುಕ್ರವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್‌ಐ ಮತ್ತು ಇತರ ಸಂಘಟನೆಗಳ ನಿಷೇಧಕ್ಕೆ ಮುನ್ನ ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಬೇಕಿತ್ತು. ಸಂಘಟನೆ ತಪ್ಪು ಮಾಡಿದ್ದರೆ, ದಾಖಲೆಗಳ ಸಹಿತ ವಿಪಕ್ಷಗಳಿಗೆ ಮನವರಿಕೆ ಮಾಡಿಕೊಡಬೇಕಿತ್ತು. ಪಿಎಫ್‌ಐ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿದ್ದರೆ, ಕೇಂದ್ರ ಸರ್ಕಾರ ಇದುವರೆಗೆ ಏನು ಮಾಡುತ್ತಿತ್ತು, ಮೂರು ವರ್ಷಗಳ ಹಿಂದೆಯೇ ಏಕೆ ನಿಷೇಧಿಸಲಿಲ್ಲ ಎಂದು ಪ್ರಶ್ನಿಸಿದರು.
ಒಂದು ಸಮುದಾಯದ ಮೂಲಭೂತವಾದಿ ಸಂಘಟನೆ ನಿಷೇಧಿಸಿ, ಮತ್ತೊಂದು ಸಮುದಾಯದ ಮೂಲಭೂತವಾಗಿ ಸಂಘಟನೆಯನ್ನು ಮುಕ್ತವಾಗಿ ಬಿಡುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಪಿಎಫ್‌ಐ ನಿಷೇಧಿಸಿದಂತೆ ಆರ್‌ಎಸ್‌ಎಸ್ ಅನ್ನೂ ನಿಷೇಧಿಸಿ ಎಂಬ ಕೂಗು ಹುಟ್ಟಿ ಗೊಂದಲ ಸೃಷ್ಟಿ ಆಗಿ ಹೊಸ ಸಮಸ್ಯೆ ಉದ್ಭವಿಸುತ್ತದೆ ಎಂದು ವಿಶ್ಲೇಷಿಸಿದರು.
ರಾಜಕೀಯ ಲಾಭದ ದುರುದ್ದೇಶದಿಂದ ಇಂತಹ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದು ಸಮಾಜದಲ್ಲಿ ಒಡಕು ಮೂಡಿಸಿದಂತೆ ಆಗುತ್ತದೆ. ಸಮಾಜದಲ್ಲಿ ಜನರನ್ನು ಒಡೆದು ಅಶಾಂತಿ ಸೃಷ್ಟಿಸುತ್ತಿರುವ ಮತ್ತು ದೇಶ ವಿರೋಧಿ ಕೃತ್ಯ ನಡೆಸುತ್ತಿರುವ ಎಲ್ಲ ಸಂಘಟನೆಗಳನ್ನು ನಿಷೇಧಿಸಬೇಕು. ಕೇವಲ ಪಿಎಫ್‌ಐ ನಿಷೇಧಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಇದು ಚುನಾವಣೆ ದೃಷ್ಟಿಯಿಂದ ರಾಜಕೀಯ ಲಾಭಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ದುಡುಕಿನ ನಿರ್ಧಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೂ ಕಾರ್ಯಕರ್ತರ ಹತ್ಯೆಯಲ್ಲಿ ಪಿಎಫ್‌ಐ ಭಾಗಿ ಆಗಿದ್ದರೆ ದಾಖಲೆ ನೀಡಲಿ, ಸುಮ್ಮನೆ ಆರೋಪ ಮಾಡುವುದರಿಂದ ಪ್ರಯೋಜನವಿಲ್ಲ. ಪಿಎಫ್‌ಐಗೆ ಆರ್‌ಎಸ್‌ಎಸ್ ಹಣಕಾಸು ನೆರವು ನೀಡಿದೆ ಎಂಬ ಆರೋಪವೂ ಇದೆ. ಅದನ್ನು ನಂಬಲು ಆಗುತ್ತದೆಯೆ? ಊಹಾಪೋಹಗಳೇ ಬೇರೆ, ವಾಸ್ತವವೇ ಬೇರೆ ಎಂದು ನುಡಿದರು.
ಗುತ್ತಿಗೆದಾರರ ಆರೋಪ:
ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿರುವುದು ಗುತ್ತಿಗೆದಾರರೇ ಹೊರತು, ಕುಮಾರಣ್ಣ ಅವರಾಗಲಿ, ರೇವಣ್ಣನವರಾಗಲಿ, ನಾನಾಗಲಿ ಮಾಡಿಲ್ಲ. ವಿಪಕ್ಷ ನಾಯಕರಾದ ಸಿದ್ದರಾಮಯ್ಯನವರು ಸಹ ಮಾಡಿಲ್ಲ. ಗುತ್ತಿಗೆದಾರರೇ ಮಾಧ್ಯಮಗಳ ಎದುರು ಇಂತಹ ಗುರುತರ ಆರೋಪ ಮಾಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಗುತ್ತಿಗೆದಾರರ ಸಂಘವೇ ಆರೋಪ ಮಾಡಿದೆ ಎಂದ ಮೇಲೆ ಅದು ನಿಜ ಇರಬೇಕು. ಈ ವಿಷಯದಲ್ಲಿ ಅಧಿಕಾರಿಗಳು ಭ್ರಷ್ಟರಾಗಿರಬೇಕು, ಇಲ್ಲವೇ ಸರ್ಕಾರ ನಡೆಸುತ್ತಿರುವವರು ಅಧಿಕಾರಿಗಳ ಮೇಲೆ ಒತ್ತಡ ಹೇರಿರಬೇಕು. ಇದನ್ನು ಸರಿಪಡಿಸಬೇಕಾದುದು ಸರ್ಕಾರದ ಕರ್ತವ್ಯ. ವಿನಾಕಾರಣ ವಿಪಕ್ಷಗಳ ಮೇಲೆ ಗೂಬೆ ಕೂರಿಸುವುದು ತರವಲ್ಲ. ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಎಂದು ಟೀಕಿಸಿದರು.