ಜಿಲ್ಲೆ

ಪಿಎಫ್​ಐ, ಎಸ್​ಡಿಪಿಐ ನಿಷೇಧಿಸಿ

ಚಿಕ್ಕಮಗಳೂರು: ಭಾರತವನ್ನು ಇಸ್ಲಾಮೀಕರಣಗೊಳಿಸಲು ಹುನ್ನಾರ ನಡೆಸುತ್ತಿರುವ ಪಿಎಫ್​ಐ, ಎಸ್​ಡಿಪಿಐ ಸಂಘಟನೆಗಳನ್ನು ನಿಷೇಧಿಸುವಂತೆ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಒತ್ತಾಯಿಸಿದರು. ಶುಕ್ರವಾರ ಎಡಿಸಿ ಬಿ.ಆರ್.ರೂಪಾ ಅವರಿಗೆ ಸಂಘಟನೆಯಿಂದ ಮನವಿ ಸಲ್ಲಿಸಿದ ನಂತರ ಮಾತನಾಡಿದ ಅವರು, ಸಂವಿಧಾನ, ರಾಷ್ಟ್ರಧ್ವಜ, ದಲಿತರನ್ನು ಉಪಯೋಗಿಸಿಕೊಂಡು ಇಸ್ಲಾಂ ರಾಷ್ಟ್ರ ಘೊಷಿಸುವ ಸಲುವಾಗಿ ಆಂತರಿಕ ಸೈನಿಕ ಶಕ್ತಿಯನ್ನು ಪಿಎಫ್​ಐ ನಿರ್ವಿುಸಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಮಾಜಿ ಮುಖ್ಯಮಂತ್ರಿ ಅಚ್ಚುತನ್ ಪಿಎಫ್​ಐ ಸಂಘಟನೆಯ ಸಂಪರ್ಕದಲ್ಲಿದ್ದ ಕಾರಣ ಬ್ಯಾನ್ ಮಾಡಿ ಎಂದು ಹಿಂದುಪರ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿವೆ. ಸಿಎಎ, ಎನ್​ಆರ್​ಸಿ, ರೈತ ಹೋರಾಟ ಹಾಗೂ ರಾಜ್ಯದ ವಿವಿಧೆಡೆ ಗಲಭೆಯಲ್ಲಿ ಪಿಎಫ್​ಐ, ಎಸ್​ಡಿಪಿಐ ಕೈವಾಡವಿರುವ ಶಂಕೆ ಇದೆ ಎಂದು ದೂರಿದರು.

ಉಪಾಧ್ಯಕ್ಷ ದಿಲೀಪ್ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ನಡೆದಿರುವ ಬಹುತೇಕ ಹತ್ಯೆಗಳಿಗೆ ಪಿಎಫ್​ಐ, ಎಸ್​ಡಿಪಿಐ ಕಾರಣ ಎಂಬುದು ಬಹಳಷ್ಟು ಪ್ರಕರಣಗಳಲ್ಲಿ ರುಜುವಾತಾಗಿದೆ. ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಪಿಎಫ್​ಐ ಸಂಚು ರೂಪಿಸಿದ್ದು ಬಿಹಾರದಲ್ಲಿ ಬಯಲಾಗಿದೆ. ಜಗತ್ತಿನ ಬಹುತೇಕ ಮುಸ್ಲಿಂ ರಾಷ್ಟ್ರಗಳಿಂದ ಈ ಸಂಘಟನೆಗಳಿಗೆ ಹಣ ಹರಿದುಬರುತ್ತಿದೆ. ವಿಪಕ್ಷದಲ್ಲಿದ್ದಾಗ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಕಮ್ಯೂನಿಸ್ಟ್ ಮುಖಂಡರು, ಬಹುತೇಕ ಮುಸ್ಲಿಂ ನಾಯಕರು, ಸೂಫಿ ಸಂತರು ಪಿಎಫ್​ಐ ಅನ್ನು ನಿರ್ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ದೇಶದ ಭದ್ರತೆ ದೃಷ್ಟಿಯಿಂದ ಈ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.