ಜಿಲ್ಲೆ

ಪಿಎಂಎಫ್​ಎಂಎಫ್ ಯೋಜನೆಗೆ ಮಾವು

ಧಾರವಾಡ: ಆತ್ಮ ನಿರ್ಭರ ಅಭಿಯಾನದ ಭಾಗವಾಗಿ ಸೂಕ್ಷ್ಮ ಮತ್ತು ಸಣ್ಣ ಆಹಾರ ಸಂಸ್ಕರಣ ಉದ್ದಿಮೆಗಳನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರದ ಸಹಯೋಗದಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ ಪಿಎಂಎಫ್​ಎಂಎಫ್ (ಖ್ಚಜಛಿಞಛಿ ್ಛ್ಟ ್ಛ್ಟಚ್ಝಜ್ಢಿಚಠಿಜಿಟ್ಞ ಟ್ಛ ಞಜ್ಚಿ್ಟ ್ಛಟಛ ಕ್ಟಟ್ಚಛಿಠಠಜ್ಞಿಜ ಉಠಿಛ್ಟಿಟ್ಟಜಿಠಛಿಠ) ಯೋಜನೆಯ ಒಂದು ಜಿಲ್ಲೆ ಒಂದು ಬೆಳೆ ಕಾರ್ಯಕ್ರಮದಡಿ ಮಾವು ಬೆಳೆ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ, ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆತ್ಮ ನಿರ್ಭರ ಅಭಿಯಾನದ ಪಿಎಂಎಫ್​ಎಂಎಫ್ ಕಾರ್ಯಕ್ರಮದ ಒಂದು ಜಿಲ್ಲೆ ಒಂದು ಉತ್ಪನ್ನ ಆಯ್ಕೆ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರವು ಆತ್ಮ ನಿರ್ಭರ ಅಭಿಯಾನದಡಿ ಆಹಾರ ಸಂಸ್ಕರಣ ಉದ್ದಿಮೆಗಳ ಮಂತ್ರಾಲಯದಿಂದ ಪಿಎಂಎಫ್​ಎಂಎಫ್ ಕಾರ್ಯಕ್ರಮದಡಿ ಜಿಲ್ಲೆಗೆ ಒಂದು ಉತ್ಪನ್ನ ಆಯ್ಕೆ ಮಾಡಿ, ಅಸಂಘಟಿತ ವಲಯದಲ್ಲಿರುವ ಸೂಕ್ಷ್ಮ ಮತ್ತು ಸಣ್ಣ ಆಹಾರ ಸಂಸ್ಕರಣ ಉದ್ದಿಮೆಗಳನ್ನು ಪ್ರೋತ್ಸಾಹಿಸಿ, ಬೆಳವಣಿಗೆಗೆ ಉತ್ತೇಜನ ನೀಡಲಿದೆ. ಈ ಯೋಜನೆಗೆ ಜಿಲ್ಲೆಯಿಂದ ಮಾವು ಉತ್ಪನ್ನ ಶಿಫಾರಸು ಮಾಡಲು ಸಮಿತಿ ನಿರ್ಧರಿಸಿದೆ. ಇದರೊಂದಿಗೆ 2ನೇ ಬೆಳೆಯಾಗಿ ಮೆಣಸಿನಕಾಯಿ ಉತ್ಪನ್ನ ಸೇರಿಸಲು ಸಮಿತಿ ಉತ್ಸಾಹ ತೋರಿದೆ ಎಂದರು.

ಜಿಲ್ಲೆಯಲ್ಲಿ ಅಂದಾಜು 8,734 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಇದ್ದು, ಮುಖ್ಯವಾಗಿ ಜಿಲ್ಲೆಯಲ್ಲಿ ಆಪೂಸ್, ಕೇಸರ, ಪೈರಿ, ಮಲ್ಲಿಕಾ ತಳಿ ಮಾವು ಬೆಳೆಯಲಾಗುತ್ತದೆ. ಪ್ರತಿ ವರ್ಷ ಅಂದಾಜು 77,458 ಮೆಟ್ರಿಕ್ ಟನ್ ಮಾವು ಉತ್ಪಾದನೆ ಇದೆ. ಮಾವು ಬೆಳೆಗಾರರು, ಮಾರಾಟಗಾರರು, ಸಂಸ್ಕರಿಸಿ ಮಾವಿನ ಉಪ ಉತ್ಪನ್ನ ತಯಾರಿಸುವವರನ್ನು ಒಂದು ಗುಂಪು ಮಾಡಿ ಅವರ ಕಾರ್ಯಗಳಿಗೆ ಪ್ರೋತ್ಸಾಹ ನೀಡುವುದು ಮತ್ತು ಸ್ಥಳೀಯವಾಗಿ ಹೆಚ್ಚು ಉದ್ಯೋಗ ಸೃಷ್ಟಿಸಿ, ವೈಜ್ಞಾನಿಕವಾಗಿ ಸಂಸ್ಕರಣೆ, ಪ್ಯಾಕ್ ಮಾಡುವುದು, ರಫ್ತು, ಮಾರಾಟಕ್ಕೆ ಉತ್ತೇಜಿಸುವುದು ಆದ್ಯತೆಯಾಗಿದೆ ಎಂದರು.

ಸಮಿತಿ ಉಪಾಧ್ಯಕ್ಷ, ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಜಿಲ್ಲೆಯ ಮಾವು ಬೆಳೆಯೊಂದಿಗೆ ಈರುಳ್ಳಿ, ಹೆಸರು, ಮೆಣಸಿನಕಾಯಿ, ಜೋಳ, ಮೆಕ್ಕೆಜೋಳ ಸಹ ಬೆಳೆಯುತ್ತಾರೆ. ಆದರೆ, ಮಾವು ಉತ್ಪನ್ನವೂ ಕಾಲ ಮಿತಿಯಲ್ಲಿ ಬಳಕೆಯಾಗಬೇಕು. ಮಾವು ಬೆಳೆಗಾರರಿಗೆ ಮತ್ತು ಸಂಸ್ಕರಣ ಘಟಕಗಳಿಗೆ ಸಂಪರ್ಕ ಮಾಡುವುದರಿಂದ ಹೆಚ್ಚು ಉದ್ಯೋಗ ಹಾಗೂ ಮಾವು ಬೆಳೆ ವಿಸ್ತರಣೆಗೆ ಸಹಾಯವಾಗುತ್ತದೆ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಐ.ಬಿ. ಮಾತನಾಡಿದರು. ಸಮಿತಿ ಸದಸ್ಯರಾದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮೋಹನ ಭರಮಕ್ಕನವರ, ತೋಟಗಾರಿಕೆ ಇಲಾಖೆ ಪ್ರಭಾರಿ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ. ಈಶ್ವರನಾಥ, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ಮಯೂರ ಕಾಂಬಳೆ, ಕೃಷಿ ಅಧಿಕಾರಿ ಮಂಜುನಾಥ ಹೂಗಾರ, ರೈತ ಉತ್ಪಾದಕ ಸಂಸ್ಥೆಗಳ ಮುಖ್ಯಸ್ಥ ಅಶೋಕ ದೊಡವಾಡ, ಪರಮೇಶ್ವರ, ಚನ್ನಬಸಯ್ಯ ಹುಬ್ಬಳ್ಳಿ, ಬಸವರಾಜ ತಾಮ್ರಗುಂಡ, ನಾರಾಯಣ ಯಲಿಗಾರ, ಇತರರು ಇದ್ದರು.