ಬಡವರಿಗೆ ಕೈಗೆಟುಕುವ ದರದಲ್ಲಿ ಮನೆಯನ್ನು ನಿರ್ಮಿಸಿಕೊಡುವ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಮೈಸೂರು ಜಿಲ್ಲೆ ರಾಜ್ಯದಲ್ಲಿಯೇ ಉತ್ತಮ ಸಾಧನೆ ತೋರಿದೆ. ಜಿಲ್ಲೆಯಲ್ಲಿ ಹೊಸದಾಗಿ ವಸತಿ ರಹಿತರು ಹಾಗೂ ನಿವೇಶನರಹಿತರ ಕುಟುಂಬಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ.
ನಿವೇಶನ, ಮನೆರಹಿತ 54,798 ಫಲಾನುಭವಿಗಳಿದ್ದು, 20,908 ಮನೆಗಳ ನಿರ್ಮಾಣ ಗುರಿ ಹಾಕಿ ಕೊಳ್ಳಲಾಗಿದೆ. ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಸೇರಿದಂತೆ ರಾಜ್ಯದಲ್ಲಿರುವ ವಸತಿ ರಹಿತರ ಮತ್ತು ನಿವೇಶನ ರಹಿತರ ಸಮೀಕ್ಷೆಯನ್ನು ನಡೆಸಲಾಗಿತ್ತು.
ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸೂಚನೆಯಂತೆ 2018ರಲ್ಲಿ ಮತ್ತೊಮ್ಮೆ ವಸತಿ ರಹಿತರ ಮತ್ತು ನಿವೇಶನ ರಹಿತರ ಸಮೀಕ್ಷೆಯನ್ನು ನಡೆಸುವ ಮೂಲಕ ಅರ್ಹರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅದರಂತೆ, ಸಮೀಕ್ಷೆಯಲ್ಲಿ ಕಂಡು ಬಂದ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದೆ.
ಈ ಪೈಕಿ ಜಿಲ್ಲೆಯ 9 ತಾಲೂಕುಗಳಿಂದ 50,206 ವಸತಿ ರಹಿತರು, 4592 ನಿವೇಶನ ರಹಿತರು ಸೇರಿದಂತೆ 54798 ಫಲಾನುಭವಿಗಳಿರುವುದು ತಿಳಿದು ಬಂದಿದೆ.
ಇದರಲ್ಲಿ 20,908 ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ.ಮೂರು ತಿಂಗಳ ಒಳಗೆ ಮನೆ ನಿರ್ಮಿಸಿಕೊಂಡು ಸಹಾಯಧನವನ್ನು ಸಂಪೂರ್ಣವಾಗಿ ಸದ್ವಿನಿಯೋಗ ಪಡೆದುಕೊಳ್ಳುವಂತೆ ಫಲಾನುಭವಿಗಳಿಗೆ ಜಿಪಂನಿಂದ ಸೂಚಿಸಲಾಗಿದೆ.
ಪಿಎಂಎ ಆವಾಸ್ ಯೋಜನೆಯಡಿ ವಸತಿರಹಿತ 50206 ಫಲಾನುಭವಿಗಳಿಗೆ ಮೂರು ವರ್ಷದ ಗುರಿಯನ್ನು ಇಟ್ಟು ಮನೆ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಸಮೀಕ್ಷೆ ಕಾರ್ಯದ ಪಟ್ಟಿಯನ್ನು ಇಟ್ಟುಕೊಂಡು ಕಾಲಕಾಲಕ್ಕೆ ಗ್ರಾಮ ಪಂಚಾಯಿತಿಗಳ ಮೂಲಕ ಮಾಹಿತಿ ಪಡೆದು ಪ್ರತಿಯೊಬ್ಬರಿಗೂ ಸೂರು ಒದಗಿಸುವುದಕ್ಕೆ ಯೋಜನೆಯ ಆಶಯವಾಗಿದೆ.
ನಂಜನಗೂಡು ತಾಲೂಕಿನಲ್ಲಿ ಅತಿ ಹೆಚ್ಚು 12493, ನಂತರದಲ್ಲಿ ಎಚ್.ಡಿ.ಕೋಟೆ ತಾಲೂಕಿನಲ್ಲಿ 9255 ಫಲಾನುಭವಿಗಳಿಗೆ ಮನೆಗಳು ಇಲ್ಲದಿರುವುದು ಸಮೀಕ್ಷೆಯಲ್ಲಿ ಪತ್ತೆಯಾಗಿದೆ. ಡಾ.ಎಂ.ನಂಜುಂಡಪ್ಪ ವರದಿಯ ಆಧಾರದ ಮೇಲೆ ಎಚ್.ಡಿ.ಕೋಟೆ ತಾಲೂಕಿಗೆ ಪ್ರಾತಿನಿಧ್ಯ ನೀಡಬೇಕು ಎಂಬ ಒತ್ತಾಯ ಬಹಳ ದಿನಗಳಿಂದಲೂ ಇದೆ. ಆದಾಗ್ಯೂ, ಕಡಿಮೆ ಸಂಖ್ಯೆಯಲ್ಲಿ ಮನೆಗಳ ಹಂಚಿಕೆ ಮಾಡಲಾಗಿದೆ. ಈ ಅಸಮತೋಲನ ನಿವಾರಣೆಗೆ ಮುಂದಿನ ದಿನಗಳಲ್ಲಿ ಕ್ರಮ ವಹಿಸಲು ಜಿಪಂ ಮುಂದಾಗಿದೆ.
ಸ್ವಂತ ಸೂರು ನಿರ್ಮಾಣ ಮಾಡಿಕೊಳ್ಳುವುದಕ್ಕಿಂತಲೂ ನಿವೇಶನ ಇಲ್ಲದೆ ಇರುವವರಿಗೆ ನಿವೇಶನ ಒದಗಿಸಲು ಕಂದಾಯ ಅಥವಾ ಖಾಸಗಿ ಭೂಮಿಯನ್ನು ಖರೀದಿಸಿ ಹಂಚಿಕೆ ಮಾಡಲು ಜಿಲ್ಲಾ ಪಂಚಾಯಿತಿ ಆಲೋಚನೆ ಮಾಡಿದೆ. ಕಂದಾಯ ಭೂಮಿ ಇರುವುದನ್ನು ಗುರುತಿಸುವಂತೆ ಗ್ರಾಮ ಆಡಳಿತಾಧಿಕಾರಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಈಗಾಗಲೇ ನಿರ್ದೇಶನ ನೀಡಲಾಗಿದೆ.
ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಕಂದಾಯ ಭೂಮಿ ಇದ್ದರೆ ಅದನ್ನು ಪರಿವರ್ತಿಸಿ ಹಂಚಿಕೆ ಮಾಡಲು ಮುಂದಾಗಿದೆ. ಒಂದು ವೇಳೆ ಇಲ್ಲದಿದ್ದರೆ ಖಾಸಗಿ ವ್ಯಕ್ತಿಗಳಿಂದ ಜಮೀನು ಖರೀದಿಸಿ ಹೊಸ ಬಡಾವಣೆ ರಚನೆ ಮಾಡುವುದಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಫಲಾನುಭವಿಗಳಾಗಿದ್ದರೆ ಸರ್ಕಾರವೇ ನಿವೇಶನ ಖರೀದಿಸುವುದಕ್ಕೂ ಅನುದಾನ ಕೊಡುವುದರಿಂದ ಸರ್ಕಾರದ ಅನುಮೋದನೆ ಪಡೆದುಕೊಳ್ಳಲಾಗುತ್ತಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಕೇಂದ್ರ ಸರ್ಕಾರದ ಸಾಮಾಜಿಕ ಕಲ್ಯಾಣದ ಪ್ರಮುಖ ಕಾರ್ಯಕ್ರಮವಾಗಿದೆ. ದೇಶದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲ ಅರ್ಹ ಫಲಾನುಭವಿಗಳಿಗೆ ಪಕ್ಕಾ ಮನೆ ಒದಗಿಸಲು ಇದನ್ನು 2015ರಲ್ಲಿ ಪ್ರಾರಂಭಿಸಲಾಯಿತು.
ಎಲ್ಲರಿಗೂ ವಸತಿ ಒದಗಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಈ ಹಿಂದೆ 1985ರಲ್ಲಿ ಸರ್ಕಾರವು ಪ್ರಾರಂಭಿಸಿದ ಇಂದಿರಾ ಆವಾಸ್ ಯೋಜನೆಯ ಮುಂದುವರಿದ ಭಾಗವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಶೇಕಡವಾರು ಪ್ರಗತಿಯಲ್ಲಿ ರಾಜ್ಯದಲ್ಲೇ ಮೈಸೂರು ಜಿಲ್ಲೆಯು ಮೊದಲ ಸ್ಥಾನ ಪಡೆದುಕೊಂಡಿದೆ. ಮೈಸೂರು ನಂತರ, ವಿಜಯನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಪ್ರಗತಿ ಕಂಡಿದೆ. ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ಕೊಟ್ಟಿರುವ ಗುರಿಯಲ್ಲಿ ಈವರೆಗೆ ಕಾಮಗಾರಿ ಆರಂಭಿಸಿಲ್ಲ ಎಂಬುದು ವರದಿಯಾಗಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಮೈಸೂರು ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ. ಮುಂಬರುವ ದಿನಗಳಲ್ಲಿ ವಸತಿ, ನಿವೇಶನರಹಿತರಿಗೆ ಮನೆಗಳನ್ನು ಕಲ್ಪಿಸಿಕೊಡಲಾಗುವುದು. ಅದಕ್ಕಾಗಿ ಕಂದಾಯ, ಖಾಸಗಿ ಭೂಮಿಯನ್ನು ಗುರುತಿಸುವ ಕೆಲಸ ಪ್ರಗತಿಯಲ್ಲಿ ಇದೆ. ಭೂಮಿ ದೊರೆತ ಬಳಿಕ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು.ಎಸ್.ಯುಕೇಶ್ ಕುಮಾರ್ಜಿಪಂ ಸಿಇಒ