ಜಿಲ್ಲೆ

ಪಿಎಂ ಸ್ವನಿಧಿ ಯೋಜನೆ ಲಾಭ ಹೆಚ್ಚು

ಚಿತ್ರದುರ್ಗ: ಪಿಎಂ ಸ್ವನಿಧಿ ಯೋಜನೆ ಲಾಭಗಳ ಕುರಿತು ಫಲಾನುಭವಿಗಳಿಗೆ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಕೌಶಲ ಮಿಷನ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಕಿರು ಸಾಲ ಸೌಲಭ್ಯ ಯೋಜನೆ ಜಾರಿಯಾಗಿದೆ ಎಂದರು.
ಇದರಡಿ 3 ಹಂತಗಳಲ್ಲಿ ವ್ಯಾಪಾರಿಗಳಿಗೆ ಸಾಲ ನೀಡಲಾಗುತ್ತಿದೆ. ಆದರೆ, ಮೊದಲ ಹಂತದಲ್ಲಿ 10 ಸಾವಿರ ಸಾಲ ಪಡೆದವರು, ಸಾಲ ಮರುಪಾವತಿ ಸದಿದ್ದರೆ 2 ಹಾಗೂ 3ನೇ ಹಂತದ ಸಾಲಕ್ಕೆ ಅನರ್ಹರಾಗುತ್ತಿದ್ದಾರೆ. ಹೀಗಾಗಿ ಮೊದಲ ಹಂತದ ಫಲಾನುಭವಿಗಳಲ್ಲಿ ಸಮರ್ಪಕವಾಗಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಪಿಎಂ ಸ್ವನಿಧಿ ಸಾಲ ಪಡೆದ ಫಲಾನುಭವಿಗಳ ಕುಟುಂಬಗಳ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಈ ಕುಟುಂಬಗಳಿಗೆ ಸ್ವನಿಧಿ ಸಮೃದ್ಧ್ ಯೋಜನೆಯಡಿ, ಪ್ರಧಾನ ಮಂತ್ರಿ ಸುರಕ್ಷಾ ಬೀಮಾ, ಜೀವನ್ ಜ್ಯೋತಿ ಬೀಮಾ, ಶ್ರಮಯೋಗಿ ಮನ್‌ಧನ್ ಯೋಜನೆ, ಒನ್ ನೇಷನ್ ಒನ್ ರೇಷನ್ ಕಾರ್ಡ್, ಜನ್‌ಧನ್, ಜನನಿ ಸುರಕ್ಷಾ, ಮಾತೃ ವಂದನಾ ಹಾಗೂ ಲೇಬರ್‌ಕಾರ್ಡ್ ಹಣಕಾಸು ಸೌಲಭ್ಯಗಳನ್ನು ನೀಡಲಾಗುವುದು ಎಂದರು.
ಆದರೆ, ಬೀದಿ ವ್ಯಾಪಾರಿಗಳಿಗೆ ಈ ಎಲ್ಲ ಯೋಜನೆಗಳ ಕುರಿತು ಮಾಹಿತಿ ಇಲ್ಲ. ಸಾಲ ಪಡೆದವರು ಸಾಲವನ್ನು ಮರುಪಾತಿ ಮಾಡಿ, ಮುಂದಿನ ಹಂತಗಳ ಸಾಲ ಪಡೆದರೆ ಸರ್ಕಾರದಿಂದ ಇನ್ನೂ ಹೆಚ್ಚಿನ ಲಾಭ ದೊರಕಲಿದೆ ಎಂಬುದನ್ನು ಮನವರಿಕೆ ಮಾಡಿ ಕೊಡಬೇಕು. ಈ ಕುರಿತು ಜಾಗೃತಿ ಹಾಗೂ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮಗಳನ್ನು ಜಿಲ್ಲಾದ್ಯಂತ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.
ಪಿಎಂ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯಲ್ಲಿ ನೋಂದಣಿಯಾದವರ ವಿವರ, ತರಬೇತಿ ಪಡೆದವರ ಸಂಖ್ಯೆ, ಯಾವ, ಯಾವ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿಗಳ ಕಚೇರಿಯಿಂದ ಸಂಗ್ರಹಿಸಬೇಕು. ಕೇವಲ ದಾಖಲೆಗಳಲ್ಲಿ ತರಬೇತಿ ನೀಡಿದರೆ ಪ್ರಯೋಜನಕ್ಕೆ ಬರುವುದಿಲ್ಲ. ತರಬೇತಿ ನೀಡುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಡಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಟಿ.ವೇಮಣ್ಣ ಮಾತನಾಡಿ, ಜಿಲ್ಲೆಯಲ್ಲಿ 26,366 ಜನರು 18 ಬಗೆಯ ವೃತ್ತಿ ತರಬೇತಿ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 11,899 ಜನರಿಗೆ ತರಬೇತಿ ನೀಡಲಾಗಿದೆ. 14,467 ಜನರಿಗೆ ತರಬೇತಿ ನೀಡ ಬೇಕಿದೆ ಎಂದು ಹೇಳಿದರು.
ಕಲಿಕೆ ಜತೆ ಕೌಶಲ ಯೋಜನೆಯಡಿ ಜಿಲ್ಲೆಯ 9 ಪ್ರಥಮ ದರ್ಜೆ ಕಾಲೇಜುಗಳಲ್ಲಿ 6 ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ವಿವಿಧ ವೃತ್ತಿ ತರಬೇತಿಗಳನ್ನು ನೀ ಡಲಾಗುತ್ತಿದೆ. ಡಿಜಿಟಲ್ ಮಾರ್ಕೆಟಿಂಗ್, ಅನಿಮೇಷನ್, ಕಂಟೆಂಟ್ ಕಮ್ಯುನಿಕೇಷನ್, ಡಾಟಾ ಸೈನ್ಸ್, ವಿಷುವಲೈಜೇಷನ್, ಮಿಡಿಯಾ ಫೀಲಂ ಮೇಕಿಂಗ್, ಸಪ್ಲೈ ಚೈನ್ ಮ್ಯಾನೇಜೆಮೆಂಟ್ ಕುರಿತು ತರಬೇತಿ ನೀಡಲಾಗುತ್ತಿದೆ ಎಂದರು.
ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಜಿಲ್ಲಾ ಮಟ್ಟದಲ್ಲಿ ರಚಿಸಿರುವ ಎಲ್ಲ್ಲ ಸಮಿತಿಗಳ ಮುಖ್ಯಸ್ಥರೊಂದಿಗೆ ಸಮನ್ವಯ ಸಾಧಿಸಿ ಅನುಪಾಲನಾ ವರದಿ ಸಲ್ಲಿಸುವಂತೆ ಕೌಶಲಮಿಷನ್ ಅಭಿಯಾನ ವ್ಯವಸ್ಥಾಪಕ ಅತಿಕ್ ರೆಹಮಾನ್ ಅವರಿಗೆ ಡಿಸಿ ಸೂಚಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಬಿ.ಆನಂದ್, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್ ಹಾಗೂ ನಗರಸಭೆಗಳ ಆಯುಕ್ತರು, ಪ್ರಾಚಾರ್ಯರು ಮತ್ತಿತರ ಅಧಿಕಾರಿಗಳು ಇದ್ದರು.

*ಕೋಟ್
ಜಿಲ್ಲೆಯ ಕೈಗಾರಿಕಾ ಬೇಡಿಕೆ ಸಮೀಕ್ಷೆ ಮಾಹಿತಿ ಆಧರಿಸಿ ಸರ್ಕಾರಿ ಹಾಗೂ ಖಾಸಗಿ ಐಟಿಐ, ಜಿಟಿಟಿಸಿಗಳಲ್ಲಿ ಹೊಸ ಕೋರ್ಸ್‌ಗಳನ್ನು ಆರಂಭಿಸಲು ಪ್ರಸ್ತಾವನೆ ಸಲ್ಲಿಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಡೇ ನಲ್ಮ್ ಯೋಜನೆ ಅನುಷ್ಠಾನದಲ್ಲಿ ಪ್ರಗತಿ ಸಾಧಿಸಬೇಕು.
ಟಿ.ವೆಂಕಟೇಶ್, ಜಿಲ್ಲಾಧಿಕಾರಿ