ಜಿಲ್ಲೆ

ಪಿಎಂ ಪೋಷಣ್ ಯೋಜನೆ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ಪಿಎಂ ಪೋಷಣ್ ಯೋಜನೆ ಪರಿಣಾಮಕಾರಿ ಅನುಷ್ಠಾನದಲ್ಲಿ ಶೈಕ್ಷಣಿಕ ಭಾಗೀದಾರರ ಪಾತ್ರ ಮುಖ್ಯವಾಗಿದೆ ಎಂದು ಅಕ್ಷರ ದಾಸೋಹ ಜಿಲ್ಲಾ ಶಿಕ್ಷಣಾಧಿಕಾರಿ ಅಶ್ವತ್ಥನಾರಾಯಣ ಹೇಳಿದರು.

ನಗರದ ಡಯಟ್‌ನಲ್ಲಿ ಸೋಮವಾರ ಮಧ್ಯಾಹ್ನದ ಬಿಸಿಯೂಟ ಯೋಜನೆ ಪರಿಣಾಮಕಾರಿ ಅನುಷ್ಠಾನ ಕುರಿತು ಜಿಲ್ಲೆಯ ಶಿಕ್ಷಣ ಸಂಯೋಜಕರು, ಬಿಆರ್‌ಪಿ ಮತ್ತು ಸಿಆರ್‌ಪಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಆರೋಗ್ಯಕ್ಕೆ ಸಮತೋಲಿತ ಆಹಾರ ಸೇವನೆ ಅಗತ್ಯ. ಬಿಸಿಯೂಟ ವಿದ್ಯಾರ್ಥಿಗಳಿಗೆ ಪ್ರತಿದಿನ ಪೌಷ್ಟಿಕಾಂಶ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

ಈ ಯೋಜನೆಗೆ 2021ರ ಸೆಪ್ಟೆಂಬರ್‌ನಲ್ಲಿ ಪಿಎಂ ಪೋಷಣ್ ಅಥವಾ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಎಂದು ಮರುನಾಮಕರಣ ಮಾಡಲಾಗಿದೆ ಎಂದರು.

ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಮರ್ಪಕವಾಗಿ ಪರಿಶೀಲನೆ ನಡೆಸಬೇಕು ಎಂದರು.

ಹಿರಿಯ ಉಪನ್ಯಾಸಕಿ ಪೂರ್ಣಿಮಾ ಮಾತನಾಡಿ, ಮಕ್ಕಳ ಕಲಿಕೆ ಪ್ರಗತಿ ಪರಿಶೀಲನೆ ಜತೆ ಇಲಾಖೆಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಬೇಕು ಎಂದರು. ನೋಡಲ್ ಅಧಿಕಾರಿ ಎಲ್. ರೇವಣ್ಣ, ಉಪನ್ಯಾಸಕ ಎಸ್. ಬಸವರಾಜು, ಸಂಪನ್ಮೂಲ ವ್ಯಕ್ತಿಗಳಾದ ಮಹೇಶ್ವರ ರೆಡ್ಡಿ, ಮಂಜುನಾಥ ಸ್ವಾಮಿ, ಹುಲಿಕುಂಟರಾಯಪ್ಪ ಮತ್ತಿತರರು ಇದ್ದರು.

ಸಿಆರ್‌ಪಿ ಗಿರಿಜಮ್ಮ ಪ್ರಾರ್ಥಿಸಿದರು. ಸತೀಶ್ ಸ್ವಾಗತಿಸಿ, ತಿಮ್ಮರಾಜು ವಂದಿಸಿದರು, ಖಾಲಿದ್‌ಹುಸೇನ್ ನಿರೂಪಿಸಿದರು.