ಚಿತ್ರದುರ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ 2018ರಲ್ಲಿ ಪಿಎಂ ಜನವಿಕಾಸ ಯೋಜನೆ ಜಾರಿಗೊಳಿಸಿದ್ದಾರೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.
ಚಿತ್ರದುರ್ಗ ತಾಲೂಕು ಮೆದೇಹಳ್ಳಿಯಲ್ಲಿ ಸೋಮವಾರ 7.51 ಕೋಟಿ ರೂ.ವೆಚ್ಚ ದ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿ ನಿಲಯಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಯೋಜನೆಯಡಿ ಅಲ್ಪಸಂಖ್ಯಾತರನ್ನು ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಮುಖ್ಯವಾಹಿನಿಗೆ ತರುವ ಪ್ರಾಮಾಣಿಕ ಪ್ರಯತ್ನವಾಗಿದೆ. ಸ್ವಾತಂತ್ರೃನಂತರ 60 ವರ್ಷ ದೇಶವನ್ನಾಳಿದ ಬಿಜೆಪಿಯೇತರ ಸರ್ಕಾರಗಳು ಅಲ್ಪಸಂಖ್ಯಾತರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿವೆ ಹೊರತು ಅವರಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸುವ ಕಾಳಜಿ ತೋರಿಸಲಿಲ್ಲ ಎಂದರು.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ಜನವಿಕಾಸ ಯೋಜನೆಯಡಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ತ್ರಿವಳಿ ತಲಾಕ್ ರದ್ದಾಗಿದೆ. ಆರ್ಟಿಕಲ್ 371ನ್ನು ರದ್ದು ಪಡಿಸಿದ ಮೇಲೆ ಜಮ್ಮು ಕಾಶ್ಮೀರದ ಚಿತ್ರಣವೇ ಬದಲಾಗಿದೆ.
ದೇಶ-ವಿದೇಶಿ ಉದ್ಯಮಿಗಳು ಜಮ್ಮು ಕಾಶ್ಮೀರದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಿದ್ದಾರೆ. ಕಾಶ್ಮೀರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದು ಅಲ್ಪಸಂಖ್ಯಾತರ ಬಗ್ಗೆ ಮೋದಿ ಅವರಿಗೆ ಇರುವ ನೈಜ ಕಾಳಜಿಯಾಗಿದೆ ಎಂದರು.
ಹಾಸ್ಟೆ ಲ್ ಕಟ್ಟಡ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ, ಗುಣಮಟ್ಟದಲ್ಲಿ ರಾಜೀ ಬೇಡವೆಂದು ಕರ್ನಾಟಕ ಹೌಸಿಂಗ್ ಬೋರ್ಡ್ ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಇಒ ರವಿಕುಮಾರ್, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ರೇಖಾ, ಗ್ರಾಪಂ ಅಧ್ಯಕ್ಷೆ ಕೆ.ಎನ್. ಕಾವ್ಯ ವಿಜಯಕುಮಾರ್, ಮಾಜಿ ಅಧ್ಯಕ್ಷ ವಿಜಯಕುಮಾರ್, ಸದಸ್ಯ ದುಗ್ಗಪ್ಪ, ಪಿಡಿಒ ಆರ್. ಪಾತಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಾಧುರಿಗಿರೀಶ್, ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸಿ. ಹನುಮಂತೇಗೌಡ, ಕೆಎಚ್‌ಬಿ ಎಇಇ ಸುನಿಲ್ ಮತ್ತಿತರರು ಇದ್ದರು.