ಬಾಗಲಕೋಟೆಯ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಚಾಲನೆ ನೀಡಿದರು. 
ಜಿಲ್ಲೆ

ಪಿಎಂ ಕಿಸಾನ್ ಸಮ್ಮಾನ ಸಮ್ಮೇಳನಕ್ಕೆ ಚಾಲನೆ

ಬಾಗಲಕೋಟೆ: ದೇಶದಾದ್ಯಂತ ಸೋಮವಾರ ಹಮ್ಮಿಕೊಂಡ ಪಿ.ಎಂ ಕಿಸಾನ್ ಸಮ್ಮೇಳನ ಕಾರ್ಯಕ್ರಮಕ್ಕೆ ಬಾಗಲಕೋಟೆಯ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಚಾಲನೆ ನೀಡಿದರು.
ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಪಿ.ಎಂ.ಕಿಸಾನ್ ಸಮ್ಮಾನ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಅನೇಕ ರೈತಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಕಿಸಾನ್ ಸಮ್ಮಾನ್ ನಿಧಿ, ರೈತ ಉತ್ಪಾದಕ ಸಂಸ್ಥೆಗಳು, ಸಾವಯವ ಕೃಷಿಗೆ ಉತ್ತೇಜನ, ಬೆಳೆ ವಿಮೆ ಹೀಗೆ ಹತ್ತು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ರೈತ ಬಾಂಧವರು ಅವುಗಳ ಪ್ರಯೋಜನ ಪಡೆಯಲು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ ಕೇಂದ್ರ ಸರ್ಕಾರದ ಅಗ್ರಿ ಸ್ಟಾರ್ಟ ಆ್ಯಪ್ ಯೋಜನೆಗಳು ಆತ್ಮನಿರ್ಭರದತ್ತ ಕೊಂಡೊಯ್ಯುವ ಮಾಧ್ಯಮಗಳಾಗಿವೆ. ಪಿ.ಎಮ್.ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಇಂದಿನಿಂದ ರಾಷ್ರ್ಟಕ್ಕೆ ಸಮರ್ಪಣೆ ಮಾಡುತ್ತಿದ್ದು ,ಅದರ ಲಾಭವನ್ನು ಪಡೆಯಲು ರೈತರಿಗೆ ಕರೆ ಕೊಟ್ಟರು.

ಕೃಷಿ ಇಲಾಖೆ ಜಂಟಿ‌ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಪಿ.ಎಂ. ಕಿಸಾನ್ ಯೋಜನೆಯಡಿ ಇಲ್ಲಿಯವರೆಗೆ 11 ಕಂತುಗಳಲ್ಲಿ ಒಟ್ಟು 2,01,478 ರೈತರಿಗೆ 373.16 ಕೋಟಿ ರೂ.ಗಳ ಜಮಾ ಆಗಿದೆ. ಇಂದು 12 ನೇ ಕಂತು 1,90,000 ರೈತರ ಖಾತೆ ವರ್ಗಾವಣೆಗೆ ಪ್ರಧಾನಮಂತ್ರಿಗಳಿಂದ ಚಾಲನೆ ನೀಡಿದ್ದಾರೆ. ಒಂದು ದೇಶ ಒಂದು ಗೊಬ್ಬರ ಯೋಜನೆಯಡಿ ಪಿ.ಎಂ ಕಿಸಾನ್ ಸಮೃದ್ಧಿ ಕೇಂದ್ರಗಳಿಗೆ ಚಾಲನೆ ನೀಡಿದ್ದು, ಬಾಗಲಕೋಟೆ ಜಿಲ್ಲೆಯ ಕುಳಗೇರಿಯಲ್ಲಿ ಪಿಪ್ಕೋ ಕಂಪನಿಯ ಮಳಿಗೆ ಇದಕ್ಕೆ ಸಾಕ್ಷಿಯಾಗಿದೆ. ಈ ಮಳಿಗೆ ಮಾರಾಟಕ್ಕೆ ಮಾತ್ರ ಸೀಮಿತವಾಗಿರದೇ, ಕೃಷಿ ವಿಚಾರ ವಿನಿಮಯ ಕೇಂದ್ರವಾಗಿ ಪರಿವರ್ತನೆಗೊಂಡಿದೆ ಎಂದರು.
ಭಾರತ ಎಂಬ ಹೆಸರಿನಡಿ ಯೂರಿಯಾ ಗೊಬ್ಬರಕ್ಕೆ ಒಂದೇ ಬ್ರಾಂಡ್ ಚೀಲದ ವಿನ್ಯಾಸಕ್ಕೆ ಚಾಲನೆ ನೀಡಿದ್ದು, ಯಾವುದೇ ಕಂಪನಿಗಳ ಹೆಸರಿನಡಿ ಇರದೇ ಭಾರತ ಎಂಬ ಹೆಸರಿನಡಿ ಯೂರಿಯಾ ಮಾರಾಟ, ಅಂತರಾಷ್ಟ್ರೀಯ ರಸಗೊಬ್ಬರದ ಇ ಮ್ಯಾಗಜೀನ್ ಇಂಡಿಯನ್ ಎಡ್ಜ ಪ್ರಧಾನಮಂತ್ರಿಗಳಿಂದ ಅನಾವರಣಗೊಂಡಿದೆ. ಇದರೊಂದಿಗೆ ಅಗ್ರಿ ಸ್ಟಾರ್ಟ ಅಪ್ ಇಂದಿನಿಂದ ದಿಲ್ಲಿಯಲ್ಲಿ ಪ್ರಾರಂಭಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಕೃಷಿ ಇಲಾಖೆಯ ಉಪನಿರ್ದೇಶಕ ಡಾ.ಎಚ್.ಡಿ.ಕೋಳೆಕರ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ. ಮೌನೇಶ್ವರಿ ಕಮ್ಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.