ಜಿಲ್ಲೆ

ಪಿಂಚಣಿಗೆ ಆಗ್ರಹಿಸಿ ಸಮಾವೇಶ

ಮೈಸೂರು: ಅರವತ್ತು ವರ್ಷ ಮೀರಿದ ಎಲ್ಲರಿಗೂ ಮಾಸಿಕ ಕನಿಷ್ಠ 3 ಸಾವಿರ ರೂ. ಪಿಂಚಣಿ ನೀಡಬೇಕು ಎಂದು ಆಗ್ರಹಿಸಿ ಪಿಂಚಣಿದಾರರ ಸಂಘಟನೆಗಳ ಸಮನ್ವಯ ಸಮಿತಿಯಿಂದ ಪಿಂಚಣಿದಾರರ ಸಮಾವೇಶವನ್ನು ಆ.19 ರಂದು ಬೆಳಗ್ಗೆ 10.30ಕ್ಕೆ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಆಯೋಜಿಸಲಾಗಿದೆ.


ಹಿರಿಯ ನಾಗರಿಕರು ಗೌರವವಾಗಿ ಮತ್ತು ನೆಮ್ಮದಿಯಿಂದ ಜೀವನ ಸಾಗಿಸುವ ಸಮಾಜವನ್ನು ಆರೋಗ್ಯಕರ ಸಮಾಜ ಎಂದು ಕರೆಯಲಾಗುತ್ತದೆ. ಪಿಂಚಣಿ ನೀಡುವುದು ಸಮಾಜದ ಮತ್ತು ಸರ್ಕಾರಗಳ ಜವಾಬ್ದಾರಿಯಾಗಿದೆ ಎಂದು ಸುಪ್ರೀಂಕೋರ್ಟ್ ಈಗಾಗಲೇ ಸ್ಪಷ್ಟಪಡಿಸಿದೆ. ಆದ್ದರಿಂದ ಪಿಂಚಣಿ ಭಿಕ್ಷೆಯಲ್ಲ, ಹಿರಿಯ ನಾಗರಿಕರ ಹಕ್ಕಾಗಿದೆ ಎಂದು ಸಂಘದ ಸಂಚಾಲಕ ಸಿ.ಆರ್. ಕೃಷ್ಣಮೂರ್ತಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.


ರಾಷ್ಟ್ರೀಯ ಜನಸಂಖ್ಯಾ ಆಯೋಗದ 2020ರ ವರದಿಯಂತೆ ದೇಶದಲ್ಲಿರುವ ಹಿರಿಯ ನಾಗರಿಕರ ಸಂಖ್ಯೆ ಸುಮಾರು 14 ಕೋಟಿ ಇದೆ. ಇವರಲ್ಲಿನ 10 ಕೋಟಿ ಜನರಿಗೆ ಯಾವುದೇ ಪಿಂಚಣಿ ಅಥವಾ ಯಾವುದೇ ರೀತಿಯ ಸಾಮಾಜಿಕ ಭದ್ರತೆಯಿಲ್ಲ. ಹೀಗಾಗಿ, ಇವರು ಅಸಹಾಯಕ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಅಮೆರಿಕ, ಆಸ್ಟ್ರೇಲಿಯಾ, ಯೂರೋಪ್ ದೇಶಗಳ ರೀತಿಯಲ್ಲಿ ಸರ್ಕಾರ ಸಾರ್ವತ್ರಿಕ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.


ಸಂಘದ ಪದಾಧಿಕಾರಿಗಳಾದ ಶ್ರೀಕಾಂತ್, ನರಸಿಂಹಮೂರ್ತಿ, ಗೋವಿಂದರಾಜು, ಬಿ.ಆರ್.ಉಮಾಕಾಂತ್, ಪಿ.ಎಂ. ಪರಮೇಶ್ವರಯ್ಯ ಇದ್ದರು.