ಬಾಗಲಕೋಟೆ ಕಾರ್ಮಿಕ ಪಿಂಚಣಿ ಯೋಜನೆಯ ಕ್ಷೇಮಾಭಿವೃದ್ಧಿ ಮಹಾಮಂಡಳ ಜಿಲ್ಲಾ ಘಟಕದ ನೇತೃತ್ವದಲ್ಲಿ ಪಿಂಚಣಿದಾರರು ಪ್ರತಿಭಟನೆ ನಡೆಸಿದರು. ಸಾರಿಗೆ ಸಂಸ್ಥೆ ನೌಕರರ ಮತ್ತು ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಮಂಟೂರ, ಅಬ್ಧುಲ್ ರೆಹಮಾನ್ ಬಿದರಕುಂದಿ, ಆರ್.ಆರ್.ಬೆಳಗಲ್, ಆರ್.ಎಸ್.ಕುಲಕರ್ಣಿ ಇದ್ದರು. 
ಜಿಲ್ಲೆ

ಪಿಂಚಣಿ ಹೆಚ್ಚಿಸಲು ಆಗ್ರಹ

ಬಾಗಲಕೋಟೆ: ಕಾರ್ಮಿಕರ ಪಿಂಚಣಿ ಯೋಜನೆಯಡಿ ಬರುವ ಪಿಂಚಣಿದಾರರ ಪಿಂಚಣಿಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿ ಕಾರ್ಮಿಕರ ಪಿಂಚಣಿ ಯೋಜನೆಯ ಕ್ಷೇಮಾಭಿವೃದ್ಧಿ ಮಹಾಮಂಡಳ ಜಿಲ್ಲಾ ಘಟಕದ ನೇತೃತ್ವದಲ್ಲಿ ಪಿಂಚಣಿದಾರರು ಪ್ರತಿಭಟನೆ ನಡೆಸಿದರು.
ನವನಗರದ ಬಸ್ ನಿಲ್ದಾಣದ ಆವರಣದಿಂದ ಗುರುವಾರ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಜಿಲ್ಲಾಡಳಿತ ಭವನ ತಲುಪಿ ಅಪರ ಜಿಲ್ಲಾಧಿಕಾರಿ ಮಹಾದೇವರ ಮುರುಗಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸಾರಿಗೆ ಸಂಸ್ಥೆ ನೌಕರರ ಮತ್ತು ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಮಂಟೂರ, ಈಗಿರುವ ಪಿಂಚಣಿಯಲ್ಲಿ ನಮ್ಮ ಬದುಕು ನಡೆಸುವುದು ದುಸ್ತರವಾಗಿದೆ. ಕೂಡಲೇ ಕೇಂದ್ರ ಸರ್ಕಾರ ನಮ್ಮ ಪಿಂಚಣಿಯನ್ನು ಹೆಚ್ಚಿಸಬೇಕು. ಪಿಂಚಣಿ ಹೆಚ್ಚಿಸಲು ಕಳೆದ ಹದಿನೈದು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಈಗಾಗಲೇ ಸುಪ್ರೀಂ ಕೋರ್ಟನಲ್ಲಿಯೂ ಕೂಡ ಇದರ ಬಗ್ಗೆ ವಾದ ವಿವಾದ ನಡೆದಿದ್ದು ತೀರ್ಪು ಕಾಯ್ದಿರಿಸಲಾಗಿದೆ. ಪಿಂಚಣಿದಾರರಿಗೆ ಕನಿಷ್ಠ 5 ರಿಂದ 9 ಸಾವಿರ ವರೆಗೆ ಪಿಂಚಣಿ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ನೂಲಿನ ಗಿರಣಿ, ಗಾರ್ಮೆಂಟ್, ಸಿಮೆಂಟ್ , ಕಾಗದ, ಉಕ್ಕಿನ ಕಾರ್ಖಾನೆ, ಸಹಕಾರಿ ಬ್ಯಾಂಕ್, ಐಟಿ, ಬಿಟಿ, ಚಿತ್ರಮಂದಿರ, ಸಕ್ಕರೆ ಕಾರ್ಖಾನೆ ಹೊಟೇಲ್ ಹೀಗೆ ವಿವಿಧ ಕಡೆ ಕೆಲಸ ನಿರ್ವಹಿಸಿರುವವರಿಗೆ ಕಾರ್ಮಿಕರ ಪಿಂಚಣಿ ಪಡೆಯುತ್ತಿರುವವರಿಗೆ ಪಿಂಚಣಿಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಅಬ್ಧುಲ್ ರೆಹಮಾನ್ ಬಿದರಕುಂದಿ, ಆರ್.ಆರ್.ಬೆಳಗಲ್, ಆರ್.ಎಸ್.ಕುಲಕರ್ಣಿ ಸಿಮೆಂಟ್ ಕಾರ್ಖಾನೆ ಖಾದಿ ಗಾಮೋದ್ಯೋಗ, ಸಕ್ಕರೆ ಕಾರ್ಖಾನೆ ನೂಲಿನ ಗಿರಣಿ ನೌಕರರು ಪ್ರತಿಭಟನೆಯಲ್ಲಿದ್ದರು.