ರಾಮದುರ್ಗ, ಬೆಳಗಾವಿ: ಪಟ್ಟಣದ ತಹಸೀಲ್ದಾರ್ ಕಚೇರಿಗೆ ಬರುವ ಜನತೆ ವಿಶ್ರಾಂತಿ ಪಡೆಯಲು ಆಸನ ವ್ಯವಸ್ಥೆ ಮಾಡಿದ ಸಮಾಜ ಸೇವಕ ಪಿ.ಎಫ್.ಪಾಟೀಲ ಅವರ ಕಾರ್ಯ ಶ್ಲಾಘನೀಯ ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಡಾ.ಪುನೀತ್ ಫೌಂಡೇಷನ್ ಹಾಗೂ ಜನಸಾಮಾನ್ಯರ ಹಿರತಕ್ಷಣಾ ಸಮಿತಿ ನೇತೃತ್ವದಲ್ಲಿ ಪಿ.ಎಫ್.ಪಾಟೀಲ ಅವರು ಕಲ್ಪಿಸಿದ ಆಸನ ವ್ಯವಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಹಸೀಲ್ದಾರ್ ಕಾರ್ಯಾಲಕ್ಕೆ ಪಕ್ಷಾತೀತವಾಗಿ ಸಮಾಜ ಸೇವಕರು ಮಾಡುವ ಸೇವೆಯನ್ನು ಸ್ವೀಕರಿಸುತ್ತೇನೆ. ಜತೆಗೆ ಕಾರ್ಯಾಲಯದ ಸ್ವಚ್ಛತೆ ಹಾಗೂ ಪುರಸಭೆಯಿಂದ ಶೌಚಗೃಹ ನಿರ್ಮಾಣಕ್ಕೆ ಒತ್ತಾಯಿಸಲಾಗುವುದು ಎಂದರು. ನ್ಯಾಯವಾದಿ ಹಾಗೂ ಬಿಜೆಪಿ ಮುಖಂಡ ಪಿ.ಎಫ್.ಪಾಟೀಲ ಮಾತನಾಡಿ, ಬಡವರ ಪರವಾಗಿ ಸೇವೆ ಮಾಡಲು ಸಿದ್ಧ ಎಂದರು.
ಪುನೀತ್ ಫೌಂಡೇಷನ್ ಪದಾಧಿಕಾರಿಗಳಾದ ನ್ಯಾಯವಾದಿ ರಾಜೇಶ ಹರ್ಲಾಪುರ, ಪ್ರಭು ಬಾಳಿಕಾಯಿ, ಪುರಸಭೆ ಸದಸ್ಯ ಶಾನೂರ್ ಯಾದವಾಡ, ಡಾ.ಪಿ.ಎಂ.ಆಪ್ಟೆ, ಈರಣ್ಣ ಕಲ್ಯಾಣಿ, ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ವಿಜಯ ಚಂದರಗಿ, ಎಚ್.ಎಸ್.ಪಾಟೀಲ, ಎನ್.ಆರ್.ಹುಚ್ಚನ್ನವರ, ಇಮಾಮಸಾಬ್ ಮುಜಾವರ ಇತರರಿದ್ದರು.