ಹಾವೇರಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಡಿ ನೋಂದಾಯಿಸಿಕೊಂಡ ರೈತರು ಮುಂಬರುವ 14ನೇ ಕಂತಿನ ಹಣ ಪಡೆಯಲು ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದ್ದಾರೆ.
ತಾಲೂಕಿನ ಕಬ್ಬೂರ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿದ ಅವರು, ಪಿ.ಎಂ.ಕಿಸಾನ್ ಯೋಜನೆಯಡಿ ಫಲಾನುಭವಿಗಳಿಗೆ ವಾರ್ಷಿಕ ಕೇಂದ್ರ ಸರ್ಕಾರದಿಂದ 6,000 ರೂ. ಮತ್ತು ರಾಜ್ಯ ಸರ್ಕಾರದಿಂದ 4,000 ರೂ ಸೇರಿ ಒಟ್ಟು ವಾರ್ಷಿಕ 10,000 ರೂ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ ಎಂದು ಹೇಳಿದರು.
ಈವರೆಗೂ ಇ-ಕೆವೈಸಿ ಮಾಡಿಸದ ಫಲಾನುಭವಿ ರೈತರುಗಳು ಈ ಕೂಡಲೇ ತಮ್ಮ ಹತ್ತಿರದ ಗ್ರಾಮ-ಒನ್, ನಾಗರಿಕ ಸೇವಾ ಕೇಂದ್ರ, ಬಾಪೂಜಿ ಸೇವಾ ಕೇಂದ್ರಗಳು ಹಾಗೂ ಅಂಚೆ ಕಚೇರಿಯಲ್ಲಿ ಪಿಎಂ.ಕಿಸಾನ್ ಈ-ಕೆವೈಸಿ ಮಾಡಿಸಿಕೊಳ್ಳಬಹುದು. ಒಂದಕ್ಕಿಂತ ಹೆಚ್ಚು ಆಧಾರ್ ಕಾರ್ಡ್‌ಗಳಿಗೆ ಒಂದೇ ಮೊಬೈಲ್ ನಂಬರ್ ನೀಡಿದ್ದ ರೈತರು ತಮ್ಮ ಬಯೊಮೆಟ್ರಿಕ್ ಥಂಬ್ ಇಂಪ್ರೆಷನ್ ಮೂಲಕ ಈ ಕೆವೈಸಿ ಮಾಡಿಕೊಳ್ಳಬಹುದು. ಇ-ಕೆವೈಸಿ ಮಾಡಿಸಲು ಜೂ.31 ಅಂತಿಮ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೆಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದು ಎಂದು ತಿಳಿಸಿದರು.
ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಪ್ರಸ್ತುತ ಹವಾಮಾನ ಕುರಿತು ರೈತರು ಅನುಸರಿಸಬೇಕಾದ ಕ್ರಮಗಳ ಕುರಿತು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್ ಮಾಹಿತಿ ನೀಡಿದರು.
ಕಬ್ಬೂರ ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.