ಸುಂಟಿಕೊಪ್ಪ : ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ 2023ನೇ ಸಾಲಿನ 2ನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ತೀವ್ರ ಕುತೂಹಲ ಮೂಡಿಸಿದ್ದು, ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪಿ.ಆರ್.ಸುನಿಲ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶಿವಮ್ಮ ಮಹೇಶ್ ಆಯ್ಕೆಯಾಗಿದ್ದಾರೆ.
ತೀವ್ರ ಜಿದ್ದಾ ಜಿದ್ದಿನಿಂದ ಕೂಡಿದ್ದ ಚುನಾವಣೆ ಆ.3 ರಂದು ನಡೆಸಬೇಕಿತ್ತು. ಆದರೆ ಅಭ್ಯರ್ಥಿಗಳು ಸಲ್ಲಿಸಿದ ಮೀಸಲಾತಿ ದೃಢೀಕರಣ ಪತ್ರದ ತಾಂತ್ರಿಕ ದೋಷದಿಂದ ಆ.10 ಕ್ಕೆ ಮುಂದೂಡಲಾಗಿತ್ತು. ಅದರಂತೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಿ.ಆರ್.ಸುನಿಲ್‌ಕುಮಾರ್, ರಫೀಕ್‌ಖಾನ್, ಶಬೀರ್ ಎ.ಮಂಜುನಾಥ್, ಬಿ.ಎಂ.ಸುರೇಶ, ಆಲಿಕುಟ್ಟಿ, ನಾಗರತ್ನ ಹಾಗೂ ಪ್ರಸಾದ್‌ಕುಟ್ಟಪ್ಪ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷರಾಗಿದ್ದ ಶಿವಮ್ಮ ಹಾಗೂ ಬಿಜೆಪಿ ಬೆಂಬಲಿತ ವಸಂತಿ ನಾಮಪತ್ರ ಸಲ್ಲಿಸಿದರು. ಬಳಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿ.ಎಂ.ಸುರೇಶ್, ಮಂಜುನಾಥ, ನಾಗರತ್ನ, ಆಲಿಕುಟ್ಟಿ, ಪ್ರಸಾದ್ ಕುಟ್ಟಪ್ಪ ನಾಮಪತ್ರ ಹಿಂಪಡೆದುಕೊಂಡರು. ನಂತರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆಗೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಿ.ಆರ್.ಸುನಿಲ್‌ಕುಮಾರ್‌ಗೆ 10 ಮತ ಲಭಿಸಿದರೆ ಶಬೀರ್‌ಗೆ 5 ಹಾಗೂ ರಫೀಕ್‌ಖಾನ್‌ಗೆ 4 ಮತ ಲಭಿಸಿತು. ಒಂದು ಮತ ತಿರಸ್ಕೃತಗೊಂಡಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಿವಮ್ಮ 11 ಮತ ಪಡೆದರೆ ವಸಂತಿ ಅವರಿಗೆ 9 ಮತ ಲಭಿಸಿತು.
ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿಯನ್ನು ಕಾಂಗ್ರೆಸ್ ತೆಕ್ಕೆಯಿಂದ ಬಿಜೆಪಿ ತೆಕ್ಕೆಗೆ ಹಾಕುವಲ್ಲಿ ಜಿಲ್ಲಾ ಬಿಜೆಪಿ ಮುಖಂಡರಾದ ಬಿ.ಬಿ.ಭಾರತೀಶ ಎಂ.ಎನ್.ಕೊಮಾರಪ್ಪ ಯಶಸ್ವಿಯಾದರು. ಚುವಣಾಧಿಕಾರಿಯಾಗಿ ಹಾರಂಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಕ ವರದರಾಜು ಕಾರ್ಯ ನಿರ್ವಹಿಸಿದರು. ಪಿಡಿಒ ವೇಣುಗೋಪಾಲ್ ಹಾಗೂ ಸಿಬ್ಬಂದಿ ಇದ್ದರು.