ಜಿಲ್ಲೆ

ಪಾಸ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದವ ತರಾಟೆಗೆ

ಯಲ್ಲಾಪುರ: ಮೀನು ಪೂರೈಕೆಗೆ ನೀಡಲಾದ ಪಾಸ್ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಯುವಕನೊಬ್ಬ ತಾಲೂಕಿನ ಗೇರಕೊಂಬೆ ಕ್ರಾಸ್ ಬಳಿ ಆನಗೋಡ ಗ್ರಾಮ ಪಂಚಾಯಿತಿ ಕರೊನಾ ಕಾರ್ಯಪಡೆಗೆ ಸಿಕ್ಕಿ ಬಿದ್ದಿದ್ದಾನೆ.

ಶೌಕತ್ ಅಲಿ ರಾಜಾ ಸಾಬ್ ಬಳಗಾರ ಎನ್ನುವವರಿಗೆ ತುರ್ತು ಅಗತ್ಯ ವಸ್ತುಗಳನ್ನು ಪೂರೈಸಲು ತಹಸೀಲ್ದಾರ್ ಕಚೇರಿಯಿಂದ ಪಾಸ್ ನೀಡಲಾಗಿತ್ತು. ಈ ಪಾಸ್ ಅನ್ನು ಬೇರೆಯವರು ಪಡೆದು ಆನಗೋಡ ಹಾಗೂ ಬಿಸಗೋಡ ಕಡೆಗಳಲ್ಲಿ ಮೀನು ಮಾರಾಟಕ್ಕೆ ಹೊರಟಿದ್ದರು. ಅವರನ್ನು ತಡೆದ ಕರೊನಾ ಕಾರ್ಯಪಡೆ, ತೀವ್ರ ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸುವ ಎಚ್ಚರಿಕೆ ನೀಡಿದರು. ಕೂಡಲೇ ಆ ವ್ಯಕ್ತಿ ಮರಳಿ ಯಲ್ಲಾಪುರಕ್ಕೆ ತೆರಳಿದ್ದಾನೆ.

ಆನಗೋಡ ಗ್ರಾಪಂ ಕರೊನಾ ಕಾರ್ಯಪಡೆ, ಬಿಸಗೋಡ, ದೇಹಳ್ಳಿ, ಸಾತೋಡ್ಡಿ, ಬಳಗಾರ ಮುಂತಾದ ಕಡೆಗೆ ಅನವಶ್ಯಕವಾಗಿ ಸುತ್ತುವವರ ಬಗ್ಗೆ ತೀವ್ರ ನಿಗಾವಹಿಸಿದ್ದರಿಂದ ಈ ಅಕ್ರಮ ಬಯಲಿಗೆ ಬಂದಿದೆ.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಮಚಂದ್ರ ಚಿಕ್ಯಾನಮನೆ, ಆನಗೋಡ ಗ್ರಾ.ಪಂ. ಸದಸ್ಯ ಕೆ.ಟಿ. ಹೆಗಡೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಾಯಣ ಗೌಡ, ದೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಕಾರ್ಯಪಡೆಯಲ್ಲಿದ್ದಾರೆ.