ಅರಕಲಗೂಡು: ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಉಡುಗೆ ತೊಡುಗೆಗೆ ಹೆಚ್ಚಿನ ಮಹತ್ವವಿದ್ದು ಸೀರೆ ನಾರಿಯರ ಗೌರವದ ಪ್ರತೀಕ ಎಂದು ಬಿಜಿಎಸ್ ಕಾಲೇಜು ಪ್ರಾಂಶುಪಾಲ ಮಹೇಶ್ ಹೊಡೆನೂರು ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಬಿಜಿಎಸ್ ಕಾಲೇಜಿನಲ್ಲಿ ಶನಿವಾರ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಓದುಗರಿಗೆ ’ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯ ಐವರು ವಿಜೇತರನ್ನು ಲಕ್ಕಿಡಿಪ್ ಮೂಲಕ ಆಯ್ಕೆ ಮಾಡಿ ಮಾತನಾಡಿದರು.
ನಮ್ಮ ಮೂಲ ಸಂಸ್ಕೃತಿ ಪರಂಪರೆಯನ್ನು ನಾವು ಮರೆಯಬಾರದು. ಭಾರತೀಯರು ಸೀರೆ, ಪಂಚೆ ಧರಿಸುವ ಮಹತ್ವದ ಉಡುಗೆ ತೊಡುಗೆ ಪದ್ಧತಿ ಪ್ರಾಚೀನ ಕಾಲದಿಂದಲೂ ಹಾಸು ಹೊಕ್ಕಾಗಿದ್ದು ಸಾಂಸ್ಕೃತಿಕವಾಗಿಯೂ ನಮ್ಮ ಹಿರಿಮೆಯನ್ನು ಹೆಚ್ಚಿಸಿದೆ. ಇಷ್ಟಲ್ಲದೆ ಕೆಲ ವಿದೇಶಿಯರು ಕೂಡ ಭಾರತೀಯ ಉಡುಗೆ ತೊಡುಗೆಗೆ ಆಕರ್ಷಿತರಾಗುತ್ತಿದ್ದಾರೆ. ಅಂತೆಯೇ ಇತ್ತೀಚಿನ ವರ್ಷಗಳಲ್ಲಿ ನಮ್ಮ ಕೆಲ ಯುವ ಸಮೂಹ ಸಹ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದು ಜೀನ್ಸ್ ಪ್ಯಾಂಟ್ ಟೀ ಶರ್ಟ್ ಗಳಿಗೆ ಆಕರ್ಷಿತರಾಗುತ್ತಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ. ಆಚಾರ-ವಿಚಾರ ಸಂಸ್ಕೃತಿಯಿಂದ ದೂರವುಳಿಯಬಾರದು. ಇಂತಹ ಸಂದರ್ಭದಲ್ಲಿ ವಿಜಯವಾಣಿ ದಿನಪತ್ರಿಕೆ ನಾರಿಯರಿಗಾಗಿಯೇ ಉಚಿತವಾಗಿ ಸೀರೆ ಹಂಚುವ ಸ್ಪರ್ಧೆ ಏರ್ಪಡಿಸಿ ನಮ್ಮ ಸಂಸ್ಕೃತಿಯಲ್ಲಿ ಉಡುಗೆ ತೊಡುಗೆ ಗಟ್ಟಿಗೊಳಿಸುವ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ ಎಂದರು.
ಉಪನ್ಯಾಸಕಿ ಎಸ್. ಗಾಯತ್ರಿ ಮಾತನಾಡಿ, ಸೀರೆ ನಮ್ಮ ದೇಶದ ಹಿರಿಮೆ ಗೌರವ, ವಿದೇಶಿಗರು ಕೂಡ ಸೀರೆ ಉಡುಪಿಗೆ ಮಹತ್ವ ಕೊಡುತ್ತಿದ್ದಾರೆ, ಮುಂದಿನ ಪೀಳಿಗೆಗೂ ನಮ್ಮದೇಶದ ಉಡುಗೆ ತೊಡುಗೆ ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ. ಇದು ನಮ್ಮ ದೇಶದ ಹೆಮ್ಮೆ ಎಂದರು.
ಉಪನ್ಯಾಸಕರಾದ ರಾಜೇಶ್ವರಿ, ರಮ್ಯಾ, ಡಯಾನಾ, ಸಿ.ಪಿ.ಆತ್ಮೀಯಾ, ಭವಾನಿ, ಎಂ.ಎಸ್.ಹೇಮಾ, ಹೇಮಲತಾ, ವೇದಾವತಿ, ನೇತ್ರಾವತಿ ಇತರರಿದ್ದರು.
ಐವರು ಲಕ್ಕಿಡಿಪ್ ವಿಜೇತರು: ಪವಿತ್ರಾ, ಮಂಜುಳಾ, ಬಿ.ಆರ್.ಪುಟಾಣಿ, ಜಾನಕಿ, ರಂಜಿತಾ.