ಪಾವಗಡ: ತಾಲೂಕಿನ ರಾಜವಂತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೇನಹಳ್ಳಿಯ ಸರ್ವೇ ನಂ.131ರಲ್ಲಿ ರಿಯಲ್ ಎಸ್ಟೇಟ್ ವ್ಯಾಪಾರಿಗಳು ನಡೆಸುತ್ತಿದ್ದ ಅಕ್ರಮ ಚಟುವಟಿಕೆಗೆ ಬ್ರೇಕ್ ಬಿದ್ದಿದೆ.
ಸಂಬಂಧಪಟ್ಟ ಇಲಾಖೆಗಳ ಯಾವುದೇ ಅನುಮತಿ ಪಡೆಯದೆ ಗುಡ್ಡಗಳನ್ನು ಅಗೆದು, ಬಂಡೆಗಳನ್ನು ಸ್ಫೋಟಿಸಿ, ಯಂತ್ರಗಳನ್ನು ಬಳಸಿ ಭೂಮಿ ಸಮತಟ್ಟು ಮಾಡುತ್ತಿರುವುದನ್ನು ಕಣ್ಣಾರೆ ಕಂಡ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು, ಕೂಡಲೇ ಕಾಮಗಾರಿ ನಿಲ್ಲಿಸುವಂತೆ ಆದೇಶಿಸಿದ್ದಾರೆ. ಜಮೀನಿಗೆ ಸಂಬಂಧಪಟ್ಟ ಎಲ್ಲ ವಿವರಗಳನ್ನು ನೀಡುವಂತೆ ತಹಸೀಲ್ದಾರ್ಗೆ ಖಡಕ್ ಸೂಚನೆ ನೀಡಿದ್ದಾರೆ. ಪಾವಗಡ ಪಟ್ಟಣದಿಂದ 3 ಕಿ.ಮೀ. ದೂರದ ಮುಖ್ಯರಸ್ತೆಯ ಪಕ್ಕದಲ್ಲೇ 4&5 ತಿಂಗಳಿನಿಂದ ಕಾಮಗಾರಿ ಜೋರಾಗಿ ನಡೆಯುತ್ತಿದ್ದರೂ ಕಂದಾಯ ಇಲಾಖೆಯವರಾಗಲಿ, ಪೊಲೀಸರಾಗಲಿ ಕ್ರಮ ವಹಿಸಿರಲಿಲ್ಲ. ಇಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಅಕ್ರಮ ಚಟುವಟಿಕೆಗೆ ತಡೆಯೊಡ್ಡಿದ್ದಾರೆ. ಈಗಾಗಲೇ ನಡೆದಿರುವ ಅಕ್ರಮ ಗಣಿಗಾರಿಕೆಯನ್ನು ಅಂದಾಜಿಸಿ ದಂಡ ವಿಧಿಸುವುದಾಗಿ ತಿಳಿಸಿದ್ದಾರೆ.
ಭೂಮಿ ಮಾಲೀಕರು ದಾಖಲಾತಿಗಳನ್ನು ಅಧಿಕಾರಿಗಳಿಗೆ ತೋರಿಸಿ, ತಾವು ಖರೀದಿಸಿ, ಜಿಲ್ಲಾಧಿಕಾರಿಯವರಿಂದ ಭೂಪರಿವರ್ತನೆ ಆದೇಶ ಪಡೆದುಕೊಂಡಿರುವ 33 ಎಕರೆ ಜಮೀನು ಸಮತಟ್ಟು ಮಾಡುತ್ತಿರುವುದಾಗಿಯೂ, ಅದಕ್ಕಾಗಿ ಅನುಮತಿ ಪಡೆದುಕೊಳ್ಳಬೇಕೆಂಬ ವಿಷಯ ತಮಗೆ ತಿಳಿಯದೆಂದೂ ವಾದಿಸಿದರು. ಇದಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ತೇಜಸ್ವಿನಿ, ಜಮೀನು ನಿಮ್ಮದಾಗಿದ್ದರೂ, ಅದರಲ್ಲಿ ಕಲ್ಲು, ಮಣ್ಣುಗಳನ್ನು ಅಗೆದು ತೆಗೆಯಲು ಅನುಮತಿ ಪಡೆಯುವುದು ಅಗತ್ಯ ಎಂದು ಎಚ್ಚರಿಸಿದ್ದಲ್ಲದೆ ಕೂಡಲೇ ಕಾಮಗಾರಿ ನಿಲ್ಲಿಸಿ, ಸ್ಥಳದಲ್ಲಿದ್ದ ಯಂತ್ರಗಳನ್ನು ಹೊರಗೆ ಕಳಿಸುವಂತೆ ಆದೇಶಿಸಿದರು.
ದೂರುದಾರರಾದ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಜಯರಾಮಯ್ಯ, ಜಿಲ್ಲಾ ಕಾರ್ಯದರ್ಶಿ ಎನ್.ರಾಮಾಂಜಿನಪ್ಪ ಮತ್ತು ವೀರ್ಲಗೊಂದಿ ಎಸ್.ನರಸಿಂಹಯ್ಯ ಅವರು ಅಧಿಕಾರಿಗಳಿಗೆ ವಿವರಗಳನ್ನು ನೀಡುತ್ತ, ಸರ್ಕಾರದ 39 ಎಕರೆ 29 ಗುಂಟೆ ಖರಾಬು ಜಮೀನು ಕಬಳಿಕೆಯಾಗುತ್ತಿರುವುದಾಗಿ ಆರೋಪಿಸಿದರು. ಅಲ್ಲದೆ ಗುಡ್ಡಗಳು, ಕಾಲು ದಾರಿ, ಹಳ್ಳ ಮುಂತಾದುವುಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡು, ಯಂತ್ರಗಳಿಂದ ಸಮತಟ್ಟು ಮಾಡುತ್ತಾ ಅಕ್ರಮವೆಸಗುತ್ತಿದ್ದಾರೆಂದು ಆರೋಪಿಸಿದರು.
ತಹಸೀಲ್ದಾರ್ ವರದರಾಜು ಮಾತನಾಡಿ, ಜಮೀನಿಗೆ ಸಂಬಂಧಿಸಿದಂತೆ ಸಂಪೂರ್ಣ ವಿವರಗಳನ್ನು ಭೂದಾಖಲೆಗಳ ಉಪನಿರ್ದೇಶಕರು (ಎ.ಡಿ.ಎಲ್.ಆರ್)ಸೂಚಿಸಿದ್ದು, ದಾಖಲೆಗಳನ್ನು ಪರಿಶೀಲಿಸಿ ಸರ್ಕಾರಿ ಜಮೀನು ಕಬಳಿಕೆ ಆಗಿರುವುದು ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.