ಜಿಲ್ಲೆ

ಪಾವಗಡ ತಾಲೂಕಿನಲ್ಲಿ 2.5 ಲಕ್ಷ ಜನಕ್ಕೆ ಒಬ್ಬರೇ ವೈದ್ಯರು

ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಬೇಸರ, ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

ಪಾವಗಡ: ತಾಲೂಕಿನಾದ್ಯಂತ ಒಟ್ಟು 2.5 ಲಕ್ಷ ಜನರಿದ್ದು, ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬರುವ ರೋಗಿಗಳಿಗೆ ತಪಾಸಣೆ ಮಾಡಿ ವೈದ್ಯೋಪಚಾರ ಮಾಡುವುದಕ್ಕೆ ಒಬ್ಬರೇ ವೈದ್ಯರಿರುವುದು ತಾಲೂಕಿನ ದುರಂತವೆಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಬೇಸರ ವ್ಯಕ್ತಪಡಿಸಿದ್ದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರ ಪುರಸತ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕು ವೈದ್ಯಾಧಿಕಾರಿ ಡಾ.ಬಾಬು ಮಾಹಿತಿ ನೀಡಿ, ತಾಲೂಕಿನಲ್ಲಿ ಒಟ್ಟು 2.5 ಲಕ್ಷ ಜನಸಂಖ್ಯೆ ಇದ್ದು, ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 14 ವೈದ್ಯರ ಹುದ್ದೆ ಇದ್ದರೂ ಒಬ್ಬರೇ ವೈದ್ಯರಿದ್ದಾರೆ. ಎಎನ್​ಎಂ ಸಿಬ್ಬಂದಿ 54 ಹುದ್ದೆ ಪೈಕಿ 19 ಜನ ಇದ್ದಾರೆ. ತಾಲೂಕಿನಾದ್ಯಂತ ಸರ್ಕಾರದ ಮಾರ್ಗದರ್ಶನದಂತೆ 25 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಪಿಎಚ್​ಸಿ ಸೆಂಟರ್​ ಇರಬೇಕಾಗಿತ್ತು. 2.5 ಸಾವಿರಕ್ಕೆ 11 ಪಿಎಚ್​ಸಿ ಸೆಂಟರ್​ ಇರಬೇಕಾಗಿದ್ದು. 7 ಪಿಎಚ್​ಸಿ ಸೆಂಟರ್​ ಇದೆ. ವೈದ್ಯರ ಕೊರತೆಯಿಂದ ಒಬ್ಬರೇ ವೈದ್ಯರನ್ನು 7 ಪಿಎಚ್​ಸಿ ಸೆಂಟರ್​ಗೆ ಚಾರ್ಜ್​ ನೀಡಲಾಗಿದೆ ಎಂದು ವರದಿ ನೀಡಿದರು.

ಈ ವೇಳೆ ಮಾತನಾಡಿದ ಕಾರಜೋಳ, 2.5 ಸಾವಿರ ಜನಕ್ಕೆ ಬಡ ರೋಗಿಗಳಿಗೆ, ಬಾಣಂತಿ ಮಹಿಳೆಯರಿಗೆ, ಗರ್ಭಿಣಿಯರಿಗೆ ಹಾಗೂ ವಯೋವೃದ್ಧರಿಗೆ ವಿವಿಧ ಆರೋಗ್ಯ ಸಮಸ್ಯೆಯಿಂದ ಬಂದ ಸಾರ್ವಜನಿಕರಿಗೆ ಹಾಗೂ ಬಡ ರೋಗಿಗಳಿಗೆ ಒಬ್ಬರೇ ವೈದ್ಯರು ಇರುವುದು ದುರಂತದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿಂದ ಇಲಾಖೆಗಳ ಪ್ರಗತಿಯ ಬಗ್ಗೆ ಮಾಹಿತಿ ಪಡೆದು ಸಂಸದರು, ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎತ್ತಿನಗಾಡಿಯ ಎರಡು ಚಕ್ರಗಳಿದ್ದಂತೆ. ಸಮಾಂತರವಾಗಿ ಹೋದಾಗ ಮಾತ್ರ ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸಲು ಸಾಧ್ಯವಾಗುತ್ತೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಜಿಪಂ ಕಿರು ನೀರು ಸರಬರಾಜು ಇಲಾಖೆಯ ಬಸುಲಿಂಗಪ್ಪ, ಅಬಕಾರಿ ನಿರೀಕ್ಷಕ ಮೈಕಲ್​ ಜಾರ್ಜ್​, ಕೃಷಿ ಸಹಾಯಕ ನಿರ್ದೇಶಕ ಅಜಯ್​, ಸಮಾಜ ಕಲ್ಯಾಣ ಅಧಿಕಾರಿ ಮಲ್ಲಿಕಾರ್ಜುನ್​, ಎಸ್​ಟಿ ಅಧಿಕಾರಿ ಯತೀಶ್​, ಸಿಡಿಪಿಒ ಸುನಿತಾ, ಎಡಿಎಂಎಂ ಶಂಕರಪ್ಪ, ಲೇಬರ್​ ಇನ್ಸ್​ಪೆಕ್ಟರ್​ ಹರೀಶ್​ ಮತ್ತಿತರರು ಇದ್ದರು.

ಅಧಿಕಾರಿಗಳು ಮೌನ!: ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಾರುತಿ ಪ್ರಸಾದ್​ ಹಾಗೂ ಬೆಸ್ಕಾಂ ಎಇಇ ಕೃಷ್ಣಮೂರ್ತಿ ಅವರು ಮಾಹಿತಿ ನೀಡುವ ಸಮಯದಲ್ಲಿ ಸಂಸದ ಗೋವಿಂದ ಕಾರಜೋಳ ನರೇಗಾ ಯೋಜನೆ ಅಡಿಯಲ್ಲಿ ಅತಿ ಹೆಚ್ಚು ಹಾಗೂ ಕಡಿಮೆ ಮಾನವ ದಿನಗಳ ಸೃಜಿಸಿರುವ ಗ್ರಾಪಂ, ಹೆಚ್ಚುವರಿ ಕಾಮಗಾರಿ ಅನುಮೋದನೆ ಮಾಡಿ ಕಾಮಗಾರಿ ಪೂರ್ಣಗೊಳ್ಳದ ಗ್ರಾಪಂ ಹೆಸರು ಮತ್ತು ಬೆಸ್ಕಾಂನಿಂದ ಗೃಹಬಳಕೆ, ವಾಣಿಜ್ಯ ಮತ್ತು ಕೃಷಿಗೆ ಎಷ್ಟು ವ್ಯಾಟ್​ ವಿದ್ಯುತ್​ ಅವಶ್ಯಕತೆ ಇದೆ ಎಂದು ಪ್ರಶ್ನೆ ಕೇಳಿದಾಗ ಅಧಿಕಾರಿಗಳ ಬಳಿ ಮಾಹಿತಿ ಇಲ್ಲದೆ ಮೌನವಹಿಸಿದರು. ನಂತರ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ48 ಪ್ರಾಥಮಿಕ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ. 29 ಪ್ರೌಢಶಾಲೆಗಳಲ್ಲಿ ಒಬ್ಬರೇ ಸರ್ಕಾರಿ ಶಿಕ್ಷಕರು ಇಲ್ಲವೆಂಬ ಮಾಹಿತಿ ನೀಡಿದರು.