ಜಿಲ್ಲೆ

ಪಾಳ್ಯದಲ್ಲಿ ದೊಡ್ಡ ಸತ್ತಿಗೆ ಮೆರವಣಿಗೆ

ಕೊಳ್ಳೇಗಾಲ: ತಾಲೂಕಿನ ಪಾಳ್ಯ ಗ್ರಾಮದಲ್ಲಿ ಭಾನುವಾರ 7 ವರ್ಷಗಳ ಬಳಿಕ ಮಲೆ ಮಹದೇಶ್ವರ ಬೆಟ್ಟದಿಂದ ಆಗಮಿಸಿದ್ದ ದೊಡ್ಡ ಸತ್ತಿಗೆ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

ಪಾಳ್ಯ ಗ್ರಾಮದಿಂದ ಮಲೆ ಮಹದೇಶ್ವರ ಬೆಟಕ್ಕೆ ಈ ಹಿಂದೆ ಕೊಡಮಾಡಿರುವ ಸತ್ತಿಗೆಯನ್ನು 3, 5 ಅಥವಾ 7 ವರ್ಷಕೊಮ್ಮೆ ಗ್ರಾಮಕ್ಕೆ ತಂದು ಉತ್ಸವ ಮಾಡುವುದು ಹಿಂದಿನಿಂದಲೂ ನಡೆದು ಬಂದಿರುವ ಪ್ರತೀತಿ. ಈ ಹಿನ್ನೆಲೆಯಲ್ಲಿ 7 ವರ್ಷ ಬಳಿಕ ಸತ್ತಿಗೆ ಉತ್ಸವ ಸಂಭ್ರಮದಿಂದ ನೆರವೇರಿತು. ಸೆ.8ರಂದು ಮಲೆ ಮಹದೇಶ್ವರ ಬೆಟ್ಟದಿಂದ ಹೊರಟ ಸತ್ತಿಗೆ ಕೌದಳ್ಳಿ ಹಾಗೂ ಚಿಕ್ಕಿಂದುವಾಡಿ ಗ್ರಾಮದಲ್ಲಿ ತಂಗಿತ್ತು. ಅಲ್ಲಿ ಗ್ರಾಮಸ್ಥರು ಪೂಜಾ ಕೈಂಕರ್ಯ ನೆರವೇರಿಸಿದ್ದರು. ಭಾನುವಾರ ಮಧ್ಯಾಹ್ನ ಪಾಳ್ಯ ಗ್ರಾಮಕ್ಕೆ ಪ್ರವೇಶಿಸಿದ್ದ ಪಾಳ್ಯದ ದೊಡ್ಡ ಸತ್ತಿಯನ್ನು ಇಲ್ಲಿನ ಮಹದೇಶ್ವರ ದೇವಾಲಯದಲ್ಲಿ ಇರಿಸಲಾಗಿತ್ತು. ಬಳಿಕ ಸಂಪ್ರದಾಯದಂತೆ ದೊಡ್ಡ ಸತ್ತಿಗೆಯನ್ನು ವಿವಿಧ ಹೂಗಳಿಂದ ಅಲಂಕರಿಸಿ ಪೂಜಾ ಕೈಂಕರ್ಯಗಳನ್ನು ಸಲ್ಲಿಸಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮಸ್ಥರು ಪೂಜೆ ಸಲ್ಲಿಸಿ ಭಕ್ತಿ ಮೆರೆದರು. ಮೆರವಣಿಗೆಯಲ್ಲಿ ಮಕ್ಕಳು ಹಾಗೂ ಯುವಕರು ಕುಣಿದು ಸಂಭ್ರಮಿಸಿದರು.