ಜಿಲ್ಲೆ

ಪಾಲಿಬೆಟ್ಟ ಲಯನ್ಸ್ ಪದಗ್ರಹಣ

ಸಿದ್ದಾಪುರ: ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾರ್ಥಕತೆ ಪಡೆಯೋಣ ಎಂದು ಲಯನ್ಸ್ ಸಂಸ್ಥೆ ಜಿಲ್ಲಾಧ್ಯಕ್ಷೆ ಬಿ.ಎಂ. ಭಾರತಿ ಹೇಳಿದರು.


ಪಾಲಿಬೆಟ್ಟ ಲಯನ್ಸ್ ಕ್ಲಬ್ ಪದಗ್ರಹಣ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ, ಬಡವರ ಮುಖದಲ್ಲಿ ನಗು ಕಾಣುವಂತೆ ಮಾಡುವುದು, ಅವರ ಬದುಕಿಗೆ ನೆರವಾಗುವುದೇ ನಮ್ಮ ಸಂಸ್ಥೆ ಉದ್ದೇಶ. ಎಲ್ಲ ಘಟಕಗಳೂ ಇದಕ್ಕೆ ಸಹಕರಿಸಬೇಕು ಎಂದು ಅವರು ಕೋರಿದರು.


ಪಾಲಿಬೆಟ್ಟ ಲಯನ್ಸ್ ಕ್ಲಬ್ 1975ರಲ್ಲಿ ಪ್ರಾರಂಭವಾಗಿ ಇಂದಿಗೂ ಉತ್ತಮ ಸೇವೆ ಸಲ್ಲಿಸುವ ಮೂಲಕ ಮಾದರಿಯಾಗಿದೆ ಎಂದರು. ಕ್ಲಬ್‌ನ ನೂತನ ಅಧ್ಯಕ್ಷ ಅನಂತರಾವ್ ಅಧಿಕಾರ ಸ್ವೀಕರಿಸಿ ಮಾತನಾಡಿ, ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಘಟಕ ಆಯೋಜಿಸಿದೆ. ಮುಂಬರುವ ದಿನಗಳಲ್ಲೂ ಆರೋಗ್ಯ, ಶಿಕ್ಷಣ, ಕೃಷಿ ರಂಗದವರಿಗೆ ಪ್ರಯೋಜನಕಾರಿಯಾಗುವ ನಿಟ್ಟಿನಲ್ಲಿ ಶಿಬಿರಗಳನ್ನು ಆಯೋಜಿಸಲಾಗುತ್ತದೆ ಎಂದರು.


ನಿಕಟಪೂರ್ವ ಅಧ್ಯಕ್ಷ ಡೋಮಿ ರೊಸಾರಿಯೊ ಮಾತನಾಡಿ, ಜನಪರ ಕಾರ್ಯಕ್ರಮಗಳಿಗೆ ಕಳೆದ ಸಾಲಿನಲ್ಲಿ ಒತ್ತು ನೀಡಲಾಗಿತ್ತು. ಕಣ್ಣಿನ ತಪಾಸಣೆ, ಮಣ್ಣು ಪರೀಕ್ಷಾ ಶಿಬಿರ, ಕಾಫಿ, ಕಾಳುಮೆಣಸು ಬೆಳೆ ಮಾಹಿತಿ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂದರು.


ಸಂಸ್ಥೆ ಕಾರ್ಯದರ್ಶಿ ಸದಾ ಕುಶಾಲಪ್ಪ, ಖಜಾಂಚಿ ಡಾ.ಭವಿಷ್ಯ ಕುಮಾರ್, ಪದಾಧಿಕಾರಿಗಳಾದ ಕನ್ಯಕಾ ಅಯ್ಯಪ್ಪ, ಡಾ.ದೇವಗಿರಿ, ಕೆ.ರಾಣಾ ಮುತ್ತಪ್ಪ, ಪ್ರಮುಖರಾದ ಅಯ್ಯಪ್ಪ, ಮೀರಾ ಸುಬ್ರಮನಿ, ಬಿ.ಪಿ. ಗಣಪತಿ, ಡಾ ಎ. ಸಿ. ಗಣಪತಿ, ಎಂ.ಎನ್, ಅಚ್ಚಯ್ಯ ಇತರರು ಹಾಜರಿದ್ದರು.