ಜಿಲ್ಲೆ

ಪಾಲಿಕೆಯಿಂದ ಗೂಡಂಗಡಿ ತೆರವು ಕಾರ್ಯಾಚರಣೆ

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ವತಿಯಿಂದ ಗದಗ ರಸ್ತೆಯಲ್ಲಿನ 18 ಗೂಡಂಗಡಿಗಳನ್ನು ಮಂಗಳವಾರ ಬೆಳಗ್ಗೆ ತೆರವುಗೊಳಿಸಲಾಯಿತು.

ಪಾಲಿಕೆ ವಲಯ ಕಚೇರಿ ನಂ. 6ರ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೆಸಿಬಿ ಯಂತ್ರ ಹಾಗೂ ಕ್ರೇನ್ ಬಳಸಿ ರಸ್ತೆ ಬದಿಯ ಅನಧಿಕೃತ ಗೂಡಂಗಡಿಗಳನ್ನು ನೆಲಸಮಗೊಳಿಸಿದರು. ತೆರವು ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಕೆಲವರು ಸ್ವಯಂಪ್ರೇರಣೆಯಿಂದ ಗೂಡಂಗಡಿಗಳನ್ನು ಬೇರೆಡೆ ಸ್ಥಳಾಂತರಿಸಿದರು.

ಹುಬ್ಬಳ್ಳಿ-ಗದಗ ರಸ್ತೆಯನ್ನು ದ್ವಿಪಥದಿಂದ ಚತುಷ್ಪಥ ಮಾರ್ಗವಾಗಿ ಅಗಲೀಕರಣಗೊಳಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಮಾರ್ಗದಲ್ಲಿ ರಸ್ತೆಯ ಎರಡು ಬದಿ ನಿರ್ವಣವಾಗಿರುವ ಫುಟ್​ಪಾತ್ ಮೇಲೆ ಅನಧಿಕೃತವಾಗಿ ಗೂಡಂಗಡಿಗಳನ್ನು ಹಾಕಲಾಗಿತ್ತು. ಈ ಅಂಗಡಿಗಳಿಗೆ ಬರುವ ಗ್ರಾಹಕರು ರಸ್ತೆಯ ಮೇಲೆ ವಾಹನಗಳನ್ನು ನಿಲ್ಲಿಸುತ್ತಿದ್ದರಿಂದ ಸುಗಮ ಸಂಚಾರಕ್ಕೆ ಅಡತಡೆಯುಂಟಾಗುವುದಲ್ಲದೇ ಅಪಘಾತಗಳು ಸಂಭವಿಸಿದ್ದವು. ಈ ಕಾರಣಕ್ಕೆ ಗೂಡಂಗಡಿಗಳನ್ನು ತೆರವುಗೊಳಿಸಬೇಕೆಂದು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗ (ಹುಬ್ಬಳ್ಳಿ) ಹಾಗೂ ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಅಧಿಕಾರಿಗಳು ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದರು.