ಜಿಲ್ಲೆ

ಪಾಲಿಕೆಯಲ್ಲಿ ಲಂಚಾವತಾರ ಸ್ಮಾರ್ಟ್‌ಸಿಟಿ ಕೆಲಸದಲ್ಲೂ ಅವ್ಯವಹಾರ ಸಾಮಾನ್ಯ ಸಭೆಯಲ್ಲಿ ಸದ್ದು

ತುಮಕೂರು : ಇ-ಸ್ವತ್ತು, ಸ್ಮಾರ್ಟ್‌ಸಿಟಿ, ಕಂದಾಯ ಶಾಖೆಯಲ್ಲಿನ ಲಂಚಾವತಾರ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದ್ದು ಮಾಡಿತು. ಭೂ ಪರಿವರ್ತನೆಯಾಗದ ಹಾಗೂ ಲೇಔಟ್ ಅನುಮೋದನೆಯಾಗದ ಖಾಲಿ ನಿವೇಶನಗಳಿಗೆ ಹಾಗೂ ಕಟ್ಟಡಗಳಿಗೆ ಆಸ್ತಿ ಸಂಖ್ಯೆ ದಾಖಲಾಗಿದ್ದಲ್ಲಿ ಅಂತಹ ಸ್ವತ್ತುಗಳಿಗೆ ಅನಧಿಕೃತ ನಮೂನೆ-3 ದಾಖಲಿಸಲು, ವರ್ಗಾವಣೆ ಮಾಡಬಹುದೆಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ಮೇಯರ್ ಬಿ.ಜಿ.ಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕೌನ್ಸಿಲ್ ಸಭೆಯಲ್ಲಿ ಪಕ್ಷೇತರ ಸದಸ್ಯ ವಿಷ್ಣುವರ್ಧನ್ ಮಾತನಾಡಿ, ಖಾತೆಯಾಗಿರುವ ಖಾಲಿ ನಿವೇಶನಗಳಿಗೆ ಅನಧಿಕೃತ ನಮೂನೆ-3 ಅನ್ನು ನೀಡಿ ಇ-ಆಸ್ತಿಯಲ್ಲಿ ವರ್ಗಾವಣೆಗೆ ಅವಕಾಶ ಮಾಡಿಕೊಡಲು ಒತ್ತಾಯಿಸಿದರು. ಜನರಿಗೆ ಇ-ಸ್ವತ್ತು ಜಾರಿಯಿಂದ ಅನುಕೂಲಕ್ಕಿಂತ, ಅನಾನುಕೂಲವೇ ಹೆಚ್ಚು? ಇದನ್ನು ರದ್ದುಪಡಿಸುವಂತೆ ಆಗ್ರಹಿಸಿದರು. ಇದಕ್ಕೆ ಬಿಜೆಪಿಯ ಸಿ.ಎನ್.ರಮೇಶ್ ಸಹ ಧ್ವನಿಗೂಡಿಸಿದರು. ಅಂತಿಮವಾಗಿ ಅನಧಿಕೃತ ನಮೂನೆ-3 ಅನ್ನು ದಾಖಲಿಸಲು, ವರ್ಗಾವಣೆ ಮಾಡಬಹುದೆಂದು ಒಕ್ಕೊರಲ ನಿರ್ಧಾರ ಕೈಗೊಳ್ಳಲಾಯಿತು.

ಸ್ಮಾರ್ಟ್‌ಸಿಟಿ ಕಾಮಗಾರಿ ಪರಿಶೀಲನೆ: ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿ ಪರಿಶೀಲಿಸಲು ಸದಸ್ಯರೇ ಖುದ್ದು ಮುಂದಾಗಿದ್ದಾರೆ. ಸ್ಮಾರ್ಟ್‌ಸಿಟಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂಬ ಆರೋಪ ಸಭೆಯಲ್ಲಿ ಪ್ರತಿಧ್ವನಿಸಿತು. ಕಳೆದ ವರ್ಷ ಆಗಸ್ಟ್ 8ರಂದು ನಡೆದ ಸಭೆಯಲ್ಲಿ ಸ್ಮಾರ್ಟ್ ಸಿಟಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು 15 ದಿನಗಳೊಳಗೆ ಪಾಲಿಕೆಗೆ ನೀಡಬೇಕೆಂದು ತಿಳಿಸಲಾಗಿತ್ತಾದರೂ ಸ್ಮಾರ್ಟ್‌ಸಿಟಿ ಕಾಮಗಾರಿಗಳ ಮಾಹಿತಿ ನೀಡದೆ ಅಧಿಕಾರಿಗಳು ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಜೆ.ಕುಮಾರ್ ಆರೋಪಿಸಿದರು. ಪಕ್ಷಾತೀತವಾಗಿ ಈ ವಿಷಯವನ್ನು ಪ್ರಸ್ತಾಪಿಸಿದ್ದು ಅಂತಿಮವಾಗಿ ಕಾಮಗಾರಿ ಕಳಪೆ, ವಿಳಂಬವನ್ನು ಪರಿಶೀಲಿಸಲು ನಗರ ಪ್ರದಕ್ಷಿಣೆ ಹಾಕಲು ಸರ್ವಾನುಮತದ ನಿರ್ಧಾರವನ್ನು ಸದಸ್ಯರು ಕೈಗೊಂಡರು. ಸಂಸದ ಜಿ.ಎಸ್.ಬಸವರಾಜು, ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ, ಉಪ ಮೇಯರ್ ನಾಜೀಮಾಬಿ, ಆಯುಕ್ತೆ ರೇಣುಕಾ ಮತ್ತಿತರರಿದ್ದರು.

ಖಾತೆಗೆ 4 ಲಕ್ಷ ರೂಪಾಯಿ ಲಂಚ : ಖಾತೆ ಬದಲಾವಣೆಗೆ ಕಂದಾಯ ಶಾಖೆಯಲ್ಲಿ 4 ಲಕ್ಷ ರೂ., ಲಂಚ ಕೇಳಿರುವುದಾಗಿ ಕಾಂಗ್ರೆಸ್‌ನ ಟಿ.ಎಂ. ಮಹೇಶ್ ಗಂಭೀರ ಆರೋಪ ಮಾಡಿದ್ದು ಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಈ ವೇಳೆ ಕೆರಳಿದ ಮೇಯರ್, ನಿರಾಧಾರ ಆರೋಪ ಬಿಟ್ಟು, ಲಂಚ ಕೇಳಿರುವರ ಹೆಸರು ಹೇಳಿ, ಕುತ್ಕೋಳ್ರಿ ಅಂತ ಗರಂ ಆದರು. ಇತ್ತ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ನಳಿನಾ ಮಾತನಾಡಿ, ಮಹೇಶ್ ಆರೋಪಕ್ಕೆ ಆಕ್ಷೇಪಿಸಿ, ಲಂಚ ಕೇಳಿರುವರು ಯಾರೆಂಬುದನ್ನು ಬಹಿರಂಗ ಪಡಿಸಿ, ಹಿಟ್ ಆ್ಯಂಡ್ ರನ್ ಬೇಡ ಎಂದರು. ಈ ವೇಳೆ ಕೃಷ್ಣಪ್ಪ ಅವರು, ಖಾತೆ ವರ್ಗಾವಣೆ, ಪೌತಿಖಾತೆ ಮೊದಲಾದ ಅರ್ಜಿ ವಿಲೇವಾರಿಗೆ 20 ದಿನಗಳ ಗಡವು ನೀಡಿದರು.

20 ದಿನಗಳಲ್ಲಿ ಅರ್ಜಿ ವಿಲೇವಾರಿ ಆಗದಿದ್ದರೆ, ಕಡತ ವಿಲೇವಾರಿ ವಿಳಂಬ ಮಾಡಿದ ಅಧಿಕಾರಿ, ಸಿಬ್ಬಂದಿಯನ್ನು ಅಮಾನತು ಮಾಡಲು ಕ್ರಮ ಕೈಗೊಳ್ಳಲಾಗುವುದು. ಅರ್ಜಿ ಸಲ್ಲಿಕೆ ವೇಳೆಗೆ ಪರಿಶೀಲಿಸಿ ಅಗತ್ಯ ದಾಖಲೆ ಹಾಗೂ ಮಾಹಿತಿ ಸೇರ್ಪಡೆ ಮಾಡಿಕೊಳ್ಳಬೇಕು. ಅರ್ಜಿ ಸಲ್ಲಿಕೆ ಬಳಿಕ ಸಂಬಂಧಿಸಿದ ದಾಖಲೆಗಳಿಲ್ಲ ಎಂದು ನೆಪ ಹೇಳಬಾರದು. ಹೊಸಖಾತೆಗೆ 30 ದಿನಗಳ ಕಾಲ ಆಕ್ಷೇಪಣೆ ಸಲ್ಲಿಕೆ ಅವಕಾಶ, 15 ದಿನ ಪ್ರಕ್ರಿಯೆಗೆ ಸೇರಿದಂತೆ 45 ದಿನಗಳ ಕಾಲವಕಾಶವಿದೆ. ಉಳಿದ ಅರ್ಜಿಗಳ ವಿಲೇವಾರಿ 20 ದಿನಗಳೊಳಗೆ ಆಗಲೇ ಬೇಕು ಎಂದು ಖಡಕ್ ಸೂಚನೆ ಕೊಟ್ಟರು.

ಕ್ಷಮೆ ಕೇಳಿದ ಆಯುಕ್ತೆ : ‘ವಾರ್ಡ್‌ಗೆ ಸಂಬಂಧಿಸಿದ ಕೆಲಸಕ್ಕೆ ಆಯುಕ್ತರ ಕಚೇರಿಗೆ ಹೋದಾಗ ಯಾಕೆ ಬಂದಿದ್ಯಾ’ ಎಂದು ಆಯುಕ್ತೆ ರೇಣುಕಾ ಅವಮಾನಿಸಿದ್ದನ್ನು ಸದಸ್ಯ ಶಿವರಾಮ್ ಸಭೆಯ ಗಮನಸೆಳೆದರು. ಬಳಿಕ ಕೆಲಸವೇನೋ ಮಾಡಿಕೊಟ್ಟರಾದರೂ ನನಗೆ ಅಪಮಾನವಾಗಿದೆ ಎಂದರು. ಈ ಬಗ್ಗೆ ಆಯುಕ್ತರ ಬಳಿ ಮೇಯರ್ ಸ್ಪಷ್ಟನೆ ಕೇಳಿದರು. ನಾನು ಉದ್ದೇಶಪೂರ್ವಕವಾಗಿ ಮಾಡಿಲ್ಲ. ಕೆಲಸ ಮಾಡಿಕೊಟ್ಟಿದ್ದೇನೆ. ಅವರಿಗೆ ನೋವಾಗಿದ್ದರೆ ಕ್ಷಮೆಯಾಚಿಸುವುದಾಗಿ ಆಯುಕ್ತೆ ರೇಣುಕಾ ಹೇಳಿದರು.

ಪಾಲಿಕೆಯಲ್ಲಿ ಕೆಲಸಗಳು ಸರಿಯಾಗಿ ಆಗುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು. ಜನರಿಗೆ ಸ್ಪಂದಿಸಿ, ಅವರನ್ನು ಕಚೇರಿಗಳಿಗೆ ಅಲೆದಾಡಿಸಬೇಡಿ. ಜಿ.ಎಸ್.ಬಸವರಾಜು ಸಂಸದ