ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ಕಾಂಗ್ರೆಸ್ ಪಕ್ಷದ ‘ಆಪರೇಷನ್ ಹಸ್ತ’ ವಿಫಲವಾಗುವ ಸಾಧ್ಯತೆ ಕಂಡು ಬಂದಿದೆ.
ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆ ಜೂ. 20ರಂದು ಧಾರವಾಡದ ಅಮೃತ ಮಹೋತ್ಸವ ಸಭಾಭವನದಲ್ಲಿ ನಡೆಯಲಿದ್ದು ಕಳೆದ ಒಂದು ವಾರದಿಂದ ಸಾಕಷ್ಟು ರಾಜಕೀಯ ಚಟುವಟಿಕೆಗಳು ನಡೆದಿವೆ. ಆಪರೇಷನ್ ಹಸ್ತದ ಭೀತಿಯಿಂದ ಪಾಲಿಕೆಯ ಬಿಜೆಪಿ ಸದಸ್ಯರು ಕಳೆದ ಮೂರು ದಿನಗಳಿಂದ ದಾಂಡೇಲಿಯ ರೆಸಾರ್ಟ್ನಲ್ಲಿ ತಂಗಿದ್ದಾರೆ.
ಈ ನಡುವೆ ಇಂದು ಪ್ರಕಟವಾದ ನ್ಯಾಯಾಲಯದ ಎರಡು ತೀರ್ಪು ಕಾಂಗ್ರೆಸ್ನ ಪ್ರಯತ್ನವನ್ನು ವಿಫಲಗೊಳಿಸದೆ ಎನ್ನಬಹುದು. ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರಿಗೆ ಉಚ್ಛ ನ್ಯಾಯಾಲಯದ ಧಾರವಾಡ ಪೀಠ ಮತದಾನಕ್ಕೆ ಅವಕಾಶ ನೀಡಿದೆ. ಮತದಾನಕ್ಕೆ ಅವಕಾಶ ಕೋರಿ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈ ಕೋರ್ಟ್ ತಿರಸ್ಕರಿಸಿದೆ. ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಇವರಿಬ್ಬರು ಮತಾಧಿಕಾರ ಹೊಂದಿದ್ದರು. ಇದೀಗ ನ್ಯಾಯಾಲಯ ತೀರ್ಪಿನಿಂದ ಬಿಜೆಪಿಗೆ 1 ಮತ ಪ್ಲಸ್ ಆದರೆ, ಕಾಂಗ್ರೆಸ್ಗೆ 1 ಮತ ಮೈನಸ್ ಆಗಿ ‘ಕೈ’ ಲೆಕ್ಕಾಚಾರ ಕಠಿಣವಾಗಿದೆ.
89 ಸಂಖ್ಯಾಬಲ (82 ಸದಸ್ಯರು ಸೇರಿ)ದಲ್ಲಿ ಸೋಮವಾರ ಸಂಜೆಯವರೆಗೆ ಬಿಜೆಪಿ 48 ಹಾಗೂ ಕಾಂಗ್ರೆಸ್ 41ಮತಗಳನ್ನು (ಎಐಎಂಐಎಂ 3 ಸದಸ್ಯರನ್ನು ಸೇರಿಸಿ) ಹೊಂದಿದೆ. ಹಾಗಾಗಿ ಇನ್ನೂ 4-5 ಸದಸ್ಯರನ್ನು ಸೆಳೆಯುವುದು ಕಾಂಗ್ರೆಸ್ಗೆ ಕಷ್ಟಕರ ಎನ್ನಲಾಗುತ್ತಿದೆ.