ಜಿಲ್ಲೆ

ಪಾಲಿಕೆಗೆ ಸದ್ಯಕ್ಕಿಲ್ಲ ಚುನಾವಣೆ ಭಾಗ್ಯ

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಗೆ ಸದ್ಯಕ್ಕಿಲ್ಲ ಚುನಾವಣೆ ಭಾಗ್ಯ. ನ್ಯಾಯಾಲಯದ ತೀರ್ಪಿನಂತೆ ಆಕಾಂಕ್ಷಿಗಳು ಇನ್ನು 6-7 ತಿಂಗಳು ಕಾಯಬೇಕು.

2019 ಮಾರ್ಚ್ 6ರಂದು ಪಾಲಿಕೆಯಲ್ಲಿ ಬಿಜೆಪಿ ತನ್ನ ಆಡಳಿತದ ಸತತ 2ನೇ ಅವಧಿಯನ್ನು ಮುಗಿಸಿತ್ತು. ಕಳೆದ 21 ತಿಂಗಳಿಂದ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಇಲ್ಲವಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳ ಪ್ರಾತಿನಿಧ್ಯವನ್ನು ಖಾಲಿ ಇಡಬಾರದು ಎಂದು ಸಂವಿಧಾನ ಹಾಗೂ ಕಾನೂನು ಹೇಳುತ್ತದೆ. ಅಧಿಕಾರಾವಧಿ ಮುಗಿದ ತಕ್ಷಣ ಚುನಾವಣೆ ನಡೆಸಿ ಜನರ ಕೈಗೆ ಆಡಳಿತ ಕೊಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಹಾಗೆ ಆಗಿಲ್ಲ. ಈಗ ನ್ಯಾಯಾಲಯದ ತೀರ್ಪನ್ನು ರಾಜ್ಯ ಸರ್ಕಾರ ಚಾಚೂ ತಪ್ಪದೇ ಪಾಲಿಸಿದರೂ ಹು-ಧಾ ಮಹಾನಗರ ಪಾಲಿಕೆಯಲ್ಲಿ ಪುರಪಿತೃರ ಆಡಳಿತವಿಲ್ಲದ ಎರಡೂವರೆ ವರ್ಷ ಕಳೆದು ಹೋಗಲಿದೆ.

ವಾರ್ಡ್ ಪುನಾರಚನೆ ಹಾಗೂ ಘೊಷಿತ ಮೀಸಲಾತಿ ಸರಿಯಾಗಿಲ್ಲವೆಂದು ಹಲವರು ನ್ಯಾಯಾಲಯಕ್ಕೆ ತಕರಾರು ಸಲ್ಲಿಸಿದ್ದರು. ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು 2017ರಲ್ಲಿ ವಾರ್ಡ್ ಮರು ವಿಂಗಡಣೆ ಮಾಡಿದ್ದರು. ಹಾಲಿ ಇರುವ ವಾರ್ಡ್​ಗಳ ಸಂಖ್ಯೆಯನ್ನು 67ರಿಂದ 82ಕ್ಕೆ ಏರಿಕೆ ಮಾಡಲಾಗಿತ್ತು. ಇದಕ್ಕೆ ಸರ್ಕಾರದಿಂದ ಅನುಮೋದನೆಯನ್ನು ಪಡೆಯಲಾಗಿದೆ. ಆದರೆ, ಭೌಗೋಳಿಕವಾಗಿ ವಾರ್ಡ್ ವಿಂಗಡಣೆ ಸರಿಯಾಗಿಲ್ಲ ಎಂಬುದು ತಕರಾರು.

ಕೆಲ ವಾರ್ಡ್​ಗಳ ಕ್ಷೇತ್ರ ವ್ಯಾಪ್ತಿಯನ್ನು 2 ವಿಧಾನಸಭೆ ಕ್ಷೇತ್ರಗಳಲ್ಲಿ ಹಂಚಿಕೆ ಮಾಡಲಾಗಿತ್ತು. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ 4 ವಿಧಾನಸಭೆ ಕ್ಷೇತ್ರಗಳು ಬರುತ್ತವೆ. ಕೆಲ ವಾರ್ಡ್​ಗಳ ಕ್ಷೇತ್ರ ವ್ಯಾಪ್ತಿಯು ಹು-ಧಾ ಸೆಂಟ್ರಲ್ ಹಾಗೂ ಪೂರ್ವ ವಿಧಾನಸಭೆ ಕ್ಷೇತ್ರಕ್ಕೆ, ಹು-ಧಾ ಪಶ್ಚಿಮ ಹಾಗೂ ಸೆಂಟ್ರಲ್ ವಿಧಾನಸಭೆ ಕ್ಷೇತ್ರಕ್ಕೆ ಹಂಚಿಕೆಯಾಗಿದ್ದವು. 44ನೇ ವಾರ್ಡ್​ನ ಅಂಬೇಡ್ಕರ್​ನಗರ ಗುಡಿ ಓಣಿ ಹಾಗೂ ಜಿಹ್ವೇಶ್ವರ ಕಲ್ಯಾಣ ಮಂಟಪ ಸುತ್ತಲಿನ ಕೆಲ ಭಾಗದ ಮತದಾರರ ಪಟ್ಟಿಯನ್ನು ಹು-ಧಾ ಸೆಂಟ್ರಲ್ ವಿಧಾನಸಭೆ ಕ್ಷೇತ್ರದಿಂದ ಹು-ಧಾ ಪೂರ್ವ ವಿಧಾನಸಭೆ ಕ್ಷೇತ್ರಕ್ಕೆ ಸೇರ್ಪಡೆ ಮಾಡಲಾಗಿದೆ.

ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳ್ಳದ ಧಾರವಾಡದ ನವಲೂರ, ತಡಸಿನಕೊಪ್ಪ, ಎತ್ತಿನಗುಡ್ಡದ ಕೆಲ ಗ್ರಾಮೀಣ ಭಾಗವನ್ನು ಸೇರಿಸಿ ವಾರ್ಡ್ ವಿಂಗಡಣೆ ಮಾಡಲಾಗಿದೆ. ಇಲ್ಲಿ ಗಡಿ ಗುರುತು ನಿರ್ಧಾರವಾಗದ, ಗೆಜೆಟ್​ನಲ್ಲಿ ಪ್ರಕಟವಾಗದ ಭೂ ಭಾಗವನ್ನು ಸೇರ್ಪಡೆಗೊಳಿಸಲಾಗಿತ್ತು. ಪಾಲಿಕೆ ಅಧಿಕಾರಿಗಳು ಜನಸಂಖ್ಯೆ ಮಿತಿ(ಪ್ರತಿ ವಾರ್ಡ್​ಗೆ 11ರಿಂದ 12 ಸಾವಿರ)ಯನ್ನಷ್ಟೇ ನೋಡಿ ವಿಂಗಡಣೆ ಮಾಡಿರುವುದು ಸ್ಪಷ್ಟ. ಇದು ಸಾಕಷ್ಟು ಜನರಿಂದ ಆಕ್ಷೇಪಣೆಗೆ ದಾರಿಯಾಗಿ ಮುಂದೆ ನ್ಯಾಯಾಲಯದ ಮೆಟ್ಟಿಲೇರಲು ಕಾರಣವಾಯಿತು.

ಸಂಜಯ ಕಪಟಕರ, ಕೃಷ್ಣ ಗಂಡಗಾಳೇಕರ, ನರೇಂದ್ರ ಕುಲಕರ್ಣಿ, ವಿಶ್ವನಾಥ ಸೋಮಾಪುರ, ಮಹಾವೀರ ಶಿವಣ್ಣವರ, ಪಾಂಡುರಂಗ ವೆರ್ಣೆಕರ, ಬಸವರಾಜ ಪೂಜಾರ, ಸಂಜಯ ಕತ್ರಿಮಲ್, ಶಿವಶಂಕರ ಗುರಗುಂಟಿ, ವೆಂಕಟೇಶ ಮೇಸ್ತ್ರಿ, ಉಮೇಶ ಲದ್ವಾ ಹಾಗೂ ಡಿ.ಕೆ. ಚವ್ಹಾಣ ಉಚ್ಚ ನ್ಯಾಯಾಲಯ ಧಾರವಾಡ ಪೀಠದಲ್ಲಿ ತಕರಾರು ಸಲ್ಲಿಸಿದ್ದರು. ಸರ್ಕಾರದ ನಿರ್ದೇಶನದ ಮೇರೆಗೆ ಇವರೆಲ್ಲರನ್ನು ಕರೆಯಿಸಿ 2020 ಫೆಬ್ರವರಿ 2ರಂದು ಅಂದಿನ ಜಿಲ್ಲಾಧಿಕಾರಿ ದೀಪಾ ಚೋಳನ್ ಲಿಖಿತ ಹೇಳಿಕೆ ದಾಖಲಿಸಿಕೊಂಡಿದ್ದರು. ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಅವರು ತಕ್ಷಣ ಚುನಾವಣೆ ನಡೆಸುವಂತೆ ಉಚ್ಚ ನ್ಯಾಯಾಲಯ ವಿಭಾಗೀಯ ಪೀಠ (ಬೆಂಗಳೂರು)ದಲ್ಲಿ ಪಿಐಎಲ್ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಿಕೊಳ್ಳಲು ರಾಜ್ಯ ಸರ್ಕಾರ ಆಸಕ್ತಿ ತೋರಿಸಬಹುದಿತ್ತು. ಶಾಸಕರು ತಮ್ಮ ಅಧಿಕಾರವನ್ನು ಪೂರ್ಣ ಪ್ರಮಾಣದಲ್ಲಿ ಅನುಭವಿಸಲು ಬಯಸಿದಂತೆ ಕಾಣುತ್ತಿದೆ. ಪಾಲಿಕೆ ಸದಸ್ಯರಿದ್ದರೆ ಶಾಸಕರ ಅಧಿಕಾರ, ಅನುದಾನ ಬಳಕೆಗೆ ಒಂದಿಷ್ಟು ಅಂಕುಶ ಬೀಳುತ್ತದೆ. ಹೀಗಾಗಿ ಸರ್ಕಾರಕ್ಕೆ ಅವಸರ ಇರಲಿಲ್ಲ.

ಮರು ವಿಂಗಡಣೆ ವೇಳೆ ಧಾರವಾಡ ನವಲೂರಿನ 10 ಸಾವಿರ ಮತದಾರರನ್ನು ವಾರ್ಡ್ ಸಂಖ್ಯೆ 23ರ ಶೆಟ್ಟರ್ ಕಾಲನಿ, ನವಲೂರ, ವಾರ್ಡ್ ಸಂಖ್ಯೆ 24ರ ತಡಸಿನಕೊಪ್ಪ, ಇಟಗಟ್ಟಿ ಹಾಗೂ ವಾರ್ಡ್ ಸಂಖ್ಯೆ 26ರ ಸತ್ತೂರು, ನವಲೂರಿಗೆ ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಿದರೂ ಅಧಿಕಾರಿಗಳು ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಹಾಗಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದೆವು.| ಮಹಾವೀರ ಶಿವಣ್ಣವರ್, ದೂರುದಾರರು
ವಾರ್ಡ್ ಸಂಖ್ಯೆ 44ರಲ್ಲಿ ಎಸ್​ಸಿ ಪುರುಷರ ಸಂಖ್ಯೆ ಹೆಚ್ಚಿದ್ದರೂ ಮಹಿಳೆಗೆ ಹಾಗೂ ವಾರ್ಡ್ ಸಂಖ್ಯೆ 53ರಲ್ಲಿ ಎಸ್​ಸಿ ಮಹಿಳೆಯರ ಸಂಖ್ಯೆ ಹೆಚ್ಚಿದ್ದರೂ ಪುರುಷರಿಗೆ ಮೀಸಲಾತಿ ಕಲ್ಪಿಸಲಾಗಿತ್ತು. | ವೆಂಕಟೇಶ ಮೇಸ್ತ್ರಿ, ದೂರುದಾರರು
ವಾರ್ಡ್ ಮರು ವಿಂಗಡಣೆಯಲ್ಲಿ ಬಹಳ ವ್ಯತ್ಯಾಸವಿಲ್ಲ. ಅಧಿಕಾರಿಗಳು ಮನಸ್ಸು ಮಾಡಿದರೆ ಒಂದೆರಡು ದಿನಗಳಲ್ಲಿ ಸರಿಪಡಿಸಬಹುದು. | ಕೃಷ್ಣ ಗಂಡಗಾಳೇಕರ, ದೂರುದಾರರು

ಮತದಾರರ ಪಟ್ಟಿ ಪ್ರಕಟಿಸಿದ 45 ದಿನ ಬಳಿಕ ವೇಳಾಪಟ್ಟಿ ಪ್ರಕಟಿಸಿ

ಬೆಂಗಳೂರು: ಅವಧಿ ಪೂರ್ಣಗೊಂಡಿರುವ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಇತ್ತೀಚೆಗಷ್ಟೇ ಸರ್ಕಾರಕ್ಕೆ ನಿರ್ದೇಶಿಸಿದ್ದ ಹೈಕೋರ್ಟ್, ಇದೀಗ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ನಡೆಸುವಂತೆ ಸರ್ಕಾರ ಹಾಗೂ ರಾಜ್ಯ ಚುನಾವಣೆ ಆಯೋಗಕ್ಕೆ ಆದೇಶಿಸಿದೆ.

ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ ನಡೆಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ನಾಗರಾಜ ಗೌರಿ, ಗುರುನಾಥ, ಇತರರು ಹೈಕೋರ್ಟ್​ಗೆ ಪಿಐಎಲ್ ಸಲ್ಲಿಸಿದ್ದರು. ಇದಲ್ಲದೆ, ಅವಧಿ ಮುಗಿದ ರಾಜ್ಯದ ಕೆಲ ನಗರ ಸ್ಥಳೀಯ ಸಂಸ್ಥೆಗಳಿಗೆ ಕಾಲಮಿತಿಯೊಳಗೆ ಚುನಾವಣೆ ನಡೆಸಲು ಸರ್ಕಾರ ಹಾಗೂ ಚುನಾವಣೆ ಆಯೋಗಕ್ಕೆ ಅಗತ್ಯ ನಿರ್ದೇಶನ ನೀಡಲು ಹೈಕೋರ್ಟ್ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು.

ಗುರುವಾರ ಈ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ, ಹು-ಧಾ ಮಹಾನಗರ ಪಾಲಿಕೆಗೆ ಸರ್ಕಾರ 6 ವಾರಗಳಲ್ಲಿ ವಾರ್ಡ್ ಮರು ವಿಂಗಡಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಅದಾದ 2 ತಿಂಗಳಲ್ಲಿ ಮೀಸಲು ಅಧಿಸೂಚನೆ ಹೊರಡಿಸಬೇಕು. ಮೀಸಲು ಅಧಿಸೂಚನೆ ನಂತರದ 2 ತಿಂಗಳಲ್ಲಿ ಚುನಾವಣೆ ಆಯೋಗ ಮತದಾರರ ಪಟ್ಟಿ ಸಿದ್ಧಪಡಿಸಬೇಕು. ಮತದಾರರ ಪಟ್ಟಿ ಪ್ರಕಟಿಸಿದ 45 ದಿನಗಳ ಬಳಿಕ ಚುನಾವಣೆ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಆದೇಶಿಸಿತು.

ಕೈಗೊಂಡ ಕ್ರಮಗಳೇನು?: ಗದಗ-ಬೆಟಗೇರಿ, ಬೀದರ್, ಹೊಸಪೇಟೆ ಮತ್ತಿತರ ನಗರಸಭೆ ಹಾಗೂ ಪುರಸಭೆಗಳಾದ ಬಂಕಾಪುರ, ಅಣ್ಣಿಗೇರಿ ಮೊದಲಾದವುಗಳ ಅವಧಿ ಪೂರ್ಣಗೊಂಡಿದೆ ಎಂದು ತಿಳಿಸಿ ಚುನಾವಣೆ ಆಯೋಗ ಹೈಕೋರ್ಟ್​ಗೆ ಪಟ್ಟಿ ಸಲ್ಲಿಸಿತು. ಅದನ್ನು ಪರಿಗಣಿಸಿದ ಪೀಠ, ಅವಧಿ ಪೂರ್ಣಗೊಂಡಿರುವ 10 ನಗರಸಭೆ, 6 ಪುರಸಭೆ ಹಾಗೂ 2 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ವಿವರ ನೀಡಿ ಜ. 15ರ ಒಳಗೆ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಜ.18ಕ್ಕೆ ಮುಂದೂಡಿತು.