ಬೆಳಗಾವಿ: ಮಹಾನಗರದ ಮಾರುಕಟ್ಟೆ ಪ್ರದೇಶ, ಮುಖ್ಯ ರಸ್ತೆಗಳಿಗೆ ಹೊಂದಿರುವ ಪಾಲಿಕೆಯ ವಾಣಿಜ್ಯ ಮಳಿಗೆ ಪಡೆದುಕೊಳ್ಳಲು ಹರಾಜಿನಲ್ಲಿ ಪೈಪೋಟಿ ಏರ್ಪಟ್ಟಿದ್ದು, ಒಬ್ಬೊಬ್ಬ ವ್ಯಕ್ತಿ ಐದರಿಂದ ಹತ್ತು ಮಳಿಗೆಗಳಿಗೆ ಅರ್ಜಿ ಸಲ್ಲಿಸುತ್ತಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಮಹಾನಗರ ಪಾಲಿಕೆಯು ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿರುವ ಮಳಿಗೆಗಳು ಸೇರಿ ಒಟ್ಟು 254 ವಾಣಿಜ್ಯ ಮಳಿಗೆಗಳನ್ನು ಮಾಸಿಕ ಬಾಡಿಗೆ ಆಧಾರದ ಮೇಲೆ 12 ವರ್ಷಗಳ ಅವಗೆ ಗುತ್ತಿಗೆ ನೀಡಲು ಮಳಿಗೆಗಳ ಹರಾಜು ಪ್ರಕ್ರಿಯೆ ಆರಂಭಿಸಿದೆ. ಅದರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 41 ಮಳಿಗೆಗಳು ಹಾಗೂ ಸಾಮಾನ್ಯ ವರ್ಗದವರಿಗೆ 213 ಮಳಿಗೆ ಮೀಸಲಿಟ್ಟಿದೆ.
ಪಾಲಿಕೆ ಸಭಾಂಗಣದಲ್ಲಿ ಆರಂಭಗೊಂಡಿರುವ 254 ವಾಣಿಜ್ಯ ಮಳಿಗೆಗಳ ಹರಾಜಿನಲ್ಲಿ ಸುಮಾರು 2 ಸಾವಿರಕ್ಕೂ ಅಕ ಅರ್ಜಿಗಳು ಸಲ್ಲಿಕೆಯಾಗಿವೆ. ಅವರಲ್ಲಿ ರಾಜಕೀಯ ಪ್ರಭಾವದ, ಆರ್ಥಿಕವಾಗಿ ಬಲಿಷ್ಠವಾಗಿರುವ ಹಾಗೂ ವಿವಿಧ ಸಂಘಟನೆಗಳ ಮುಖ್ಯಂಡರು ತಮ್ಮ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿ 5 ರಿಂದ 10 ಮಳಿಗೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ.
ಇದರಿಂದಾಗಿ ಹರಾಜಿನಲ್ಲಿ ಪೈಪೋಟಿ ಏರ್ಪಟ್ಟಿದ್ದರಿಂದ ಮಳಿಗೆಗಳ ಮಾಸಿಕ ಬಾಡಿಗೆ ದರ 30 ಸಾವಿರ ರೂ. ವರೆಗೆ ಏರಿಕೆ ಕಂಡಿದೆ. ಪರಿಣಾಮ ಮಧ್ಯಮ ವರ್ಗದ ಹಾಗೂ ಹಿಂದುಳಿದ ವರ್ಗದ ವ್ಯಾಪಾರಿಗಳು ಮಳಿಗೆ ಸೌಲಭ್ಯದಿಂದ ವಂಚಿತರಾಗಿದ್ದಾರೆ. ನನೆಗುದಿಗೆ ಬಿದ್ದಿದ್ದ ಮಹಾನಗರ ಪಾಲಿಕೆಯ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಆರಂಭಗೊಂಡಿದ್ದು, ಬಹುತೇಕ ಮಳಿಗೆಗಳು ಮಾರುಕಟ್ಟೆ ಪ್ರದೇಶದಲ್ಲಿರುವುದರಿಂದ ಮಳಿಗೆ ಪಡೆದುಕೊಳ್ಳುವ ಪೈಪೋಟಿ ಜೋರಾಗಿದೆ. ಹಾಗಾಗಿಯೇ ಹರಾಜಿನಲ್ಲಿ ಪಾಲಿಕೆ ನಿಗದಿ ಪಡಿಸಿದ ದರಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಕನಿಷ್ಠ 2,500 ರೂ. ಬಾಡಿಗೆಯ ಮಳಿಗೆ ಹರಾಜಿನಲ್ಲಿ 10 ಸಾವಿರ ರೂ.ಗೆ ಏರಿಕೆ ಕಂಡಿದೆ. ಪಾಲಿಕೆಯು ಒಬ್ಬರಿಗೆ ಒಂದೇ ಮಳಿಗೆ ಎಂಬ ನಿಯಮ ಜಾರಿಗೆ ತರಬೇಕು. ಜತೆಗೆ ಮಳಿಗೆಗಳ ಬಾಡಿಗೆ ದರ ಕಡಿಮೆ ಮಾಡಬೇಕು ಎಂದು ಬಡ ವ್ಯಾಪಾರಿಗಳು ಆಗ್ರಹಿಸಿದ್ದಾರೆ.
ಮಹಾನಗರ ಪಾಲಿಕೆಯ ವಾಣಿಜ್ಯ ಹರಾಜಿನಲ್ಲಿ ಮಾಸಿಕ 10 ಸಾವಿರ ರೂ. ಬಾಡಿಗೆ ಆಧಾರದ ಮೇಲೆ ಐದರಿಂದ ಹತ್ತು ಮಳಿಗೆಗಳನ್ನು ಪ್ರಭಾವಿ ವ್ಯಕ್ತಿಗಳು ಪಡೆದುಕೊಂಡಿದ್ದಾರೆ. ಇವರೆಲ್ಲರೂ ತಮ್ಮ ರಾಜಕೀಯ ಅಕಾರ ಬಳಸಿಕೊಂಡು ಮಾಸಿಕ 20 ರಿಂದ 30 ಸಾವಿರ ರೂ. ಬಾಡಿಗೆಗೆ ಬೇರೆಯವರಿಗೆ ನೀಡುತ್ತಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಿಟ್ಟಿರುವ ಮಳಿಗೆಗಳನ್ನೂ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಪಾಲಿಕೆ ಅಕಾರಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಸಾಮಾನ್ಯ ವರ್ಗದ ಜನರಿಗೆ ಪಾಲಿಕೆಯ ಸೌಲಭ್ಯಗಳು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಆರಂಭವಾಗಿ ವಾರ ಕಳೆಯಿತು. ಒಬ್ಬ ವ್ಯಕ್ತಿ 5 ರಿಂದ 10 ಮಳಿಗೆಗಳಿಗಾಗಿ ಅರ್ಜಿ ಸಲ್ಲಿಸುತ್ತಿರುವ ಕುರಿತು ದೂರುಗಳು ಬಂದಿವೆ. ಆದರೆ, ಸಾರ್ವಜನಿಕವಾಗಿ ಹರಾಜು ಪ್ರಕ್ರಿಯೆ ನಡೆಯುತ್ತಿರುವುದರಿಂದ ಒಬ್ಬ ವ್ಯಕ್ತಿಗೆ ಒಂದೇ ಅರ್ಜಿ ಹಾಕುವಂತೆ ಹೇಳಲು ಬರುವುದಿಲ್ಲ.|ಡಾ.ರುದ್ರೇಶ ಘಾಳಿ, ಮಹಾನಗರ ಪಾಲಿಕೆ ಆಯುಕ್ತ