ಕಲಬುರಗಿ: ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ಹತ್ತು ವರ್ಷ ದಿನಗೂಲಿ ಸೇವೆ ಸಲ್ಲಿಸಿ, ಸಕ್ರಮಗೊಂಡ ನಿವೃತ್ತ ನೌಕರರಿಗೆ ಕಳೆದ ಏಳೆಂಟು ವರ್ಷದಿಂದ ಪಿಂಚಣಿ ಸೌಲಭ್ಯ ನೀಡುತ್ತಿಲ್ಲ, ಕೂಡಲೇ ಅದನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮಹಾನಗರ ಪಾಲಿಕೆ ನಿವೃತ್ತ ನೌಕರರ ಸಂಘಗಳ ಒಕ್ಕೂಟದ ಅಧ್ಯಕ್ಷ ವೀರಭದ್ರ ಸಿಂಪಿ ಒತ್ತಾಯಿಸಿದ್ದಾರೆ.
ಈ ಕುರಿತು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ೧೦ ವರ್ಷ ಸೇವೆ ಸಲ್ಲಿಸಿ ಸಕ್ರಮವಾಗಿ ನಿವೃತ್ತರಾದ ೮೦೦ ನೌಕರರಿದ್ದಾರೆ. ನಿವೃತ್ತರಿಗೆ ಸರ್ಕಾರದ ಆದೇಶದಂತೆ ಅರ್ಹತಾದಾಯಕ ಸೇವೆ ಸೇರಿಸಿ ಪಿಂಚಣಿ ನೀಡಬೇಕು. ವಿನಾಕಾರಣ ವಿಳಂಬ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪಾಲಿಕೆಯ ನಿವೃತ್ತ ಪೌರ ಕಾರ್ಮಿಕರು, ಅಧಿಕಾರಿ, ನೌಕರರಿಗೆ ಅರ್ಹತಾದಾಯಕ ಸೇವೆಯನ್ನು ನಿವೃತ್ತಿಯೊಂದಿಗೆ ಸೇರಿಸಿ ಕೊಡಬೇಕು. ಆದರೆ ಇದುವರೆಗೆ ನೀಡುತ್ತಿಲ್ಲ. ಇದೇ ನಿಯಮ ಇತರ ಇಲಾಖೆಗಳಲ್ಲಿ ದಿನಕೂಲಿ ಸೇವೆ ಸಲ್ಲಿಸಿದವರಿಗೆ ಕೊಡಲಾಗುತ್ತಿದೆ. ಈ ಇಬ್ಬಂದಿತನ ಕೈಬಿಡಬೇಕು. ಪ್ರಸ್ತುತ ಪೌರಾಡಳಿತ ನಿರ್ದೇಶನಾಲಯದಿಂದ ಕಡತ ವಿಲೇವಾಯಲ್ಲಿ ವಿಳಂಬ ಆಗುತ್ತಿದೆ. ಕೂಡಲೇ ಮಾಹಿತಿ ಪಡೆದು, ೧೦ ಪಾಲಿಕೆಗಳ ನಿವೃತ್ತ ನೌಕರರಿಗೆ ಅರ್ಹತಾದಾಯಕ ಸೇವೆ ಮಂಜೂರು ಮಾಡಬೇಕು ಎಂದು ಕೋರಿದ್ದಾರೆ.
ಹಲವು ನಿವೃತ್ತ ನೌಕರರು ಈಗಾಗಲೇ ಮರಣ ಹೊಂದಿದ್ದಾರೆ. ಇರುವವರ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯೂ ಹದಗೆಟ್ಟಿದ್ದು, ನೆಮ್ಮದಿಯ ಜೀವನಕ್ಕಾಗಿ ಅರ್ಹಹತಾದಾಯಕ ಸೇವೆ ಮಂಜೂರಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.