ಸವಣೂರ: ಪುರಸಭೆಯಲ್ಲಿ ಇ ಸ್ವತ್ತು ಯೋಜನೆಯಡಿ ಆಸ್ತಿ ನೋಂದಣಿ ಮಾಡುವುದು, ಉತಾರ ಹಾಗೂ ಖಾತೆ ಬದಲಾವಣೆಗಾಗಿ ಅಲೆದಾಡಿ ಬೇಸತ್ತ ನಿವೃತ್ತ ಆರೋಗ್ಯ ಅಧಿಕಾರಿ ಜಂಗಮ ಪಾಲಾಕ್ಷಯ್ಯ ಸಾಲಿಮಠ ಗಾಂಧಿಗಿರಿ ಮೂಲಕ ಶುಕ್ರವಾರ ಪಟ್ಟಣದ ಪುರಸಭೆ ಮುಖ್ಯದ್ವಾರದಲ್ಲಿ ಮಲಗಿ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಶಾಕ್ ನೀಡಿದರು.
ಕಳೆದ ಹಲವು ವರ್ಷಗಳಿಂದ ಆಸ್ತಿಯನ್ನು ಇ ಸ್ವತ್ತು ಯೋಜನೆಯಡಿ ನೋಂದಣಿ ಮಾಡಿಸಿ ಉತ್ತಾರ ಪಡೆಯಲು ಅಲೆದಾಡಿ ಬೇಸತ್ತು ಗಾಂಧಿಗಿರಿ ಪ್ರತಿಭಟನೆಗೆ ಮುಂದಾಗಿದ್ದೇನೆ ಎಂದು ತಿಳಿಸಿದರು. ಪಾಲಾಕ್ಷಯ್ಯ ಸಾಲಿಮಠ ಅವರು ನಿವೃತ್ತ ಸರ್ಕಾರಿ ನೌಕರರಾಗಿದ್ದು, ಪುರಸಭೆ ದ್ವಾರಬಾಗಿಲಿನಲ್ಲಿ ಮಲಗಿ ಪ್ರತಿಭಟನೆ ನಡೆಸುವವರೆಗೂ ಅಧಿಕಾರಿಗಳು ಅವರನ್ನು ಸತಾಯಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪುರಸಭೆ ವ್ಯವಸ್ಥಾಪಕ ಮಹೇಶ ದೊಡ್ಡಣ್ಣವರ, ಪ್ರತಿಭಟನೆ ಹಿಂಪಡೆಯುವಂತೆ ಸಾಲಿಮಠ ಅವರಿಗೆ ಮನವಿ ಮಾಡಿದರು. ನನ್ನ ಕೆಲಸ ಮಾಡಿಕೊಡುವುದಾದರೆ ಪ್ರತಿಭಟನೆ ಹಿಂಪಡೆಯುತ್ತೇನೆ ಎಂದು ಸಾಲಿಮಠ ಪಟ್ಟು ಹಿಡಿದರು. ಇದರಿಂದ, ಕೆಲಕಾಲ ಗೊಂದಲ ಉಂಟಾಯಿತು. ನಂತರ ನೆರೆದಿದ್ದ ಜನರು ಪುರಸಭೆ ಅಧಿಕಾರಿಗಳಿಗೆ ಛೀಮಾರಿ ಹಾಕಿದರು. ಆಗ ಅಧಿಕಾರಿಗಳು ನಿಮ್ಮ ಕೆಲಸ ಮಾಡಿಕೊಡುತ್ತೇವೆ ಎಂದರು. ಬಳಿಕ ಸಾಲಿಮಠ ಅವರು ಪ್ರತಿಭಟನೆ ಕೈಬಿಟ್ಟರು.
ಸಾಲಿಮಠ ಅವರಿಗೆ ಸಂಬಂಧಿಸಿದ ಎರಡು ಆಸ್ತಿ ಕುರಿತು ಅವರಿಗೆ ಇ ಸ್ವತ್ತು ನೋಂದಣಿ ಹಾಗೂ ಉತಾರ ನೀಡಬೇಕಿತ್ತು. ಒಂದು ಆಸ್ತಿಯ ಇ ಸ್ವತ್ತು ಉತಾರ ನೀಡಲಾಗಿದೆ. ಮತ್ತೊಂದು ಆಸ್ತಿಯ ಕರ ತುಂಬುವಲ್ಲಿ ಗೊಂದಲವಾಗಿದ್ದರಿಂದ ಆ ಕೆಲಸ ವಿಳಂಬವಾಗಿದೆ. ಅವರ ಸಮಸ್ಯೆ ಸರಿಪಡಿಸಲಾಗಿದೆ.| ಮಹೇಶ ದೊಡ್ಡಣ್ಣವರ ಸವಣೂರ ಪುರಸಭೆ ವ್ಯವಸ್ಥಾಪಕ
EndFragment