ಕೆ.ಆರ್.ಸಾಗರ: ಪಾಲಹಳ್ಳಿ-ಕೆ.ಆರ್.ಸಾಗರ ಮುಖ್ಯ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿಗೆ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಸೋಮವಾರ ಪಂಪ್‌ಹೌಸ್ ಸರ್ಕಲ್ ಬಳಿ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, 9.40 ಕೋಟಿ ರೂ. ವೆಚ್ಚದಲ್ಲಿ 5 ಕಿಮೀ ರಸ್ತೆ ಅಭಿವೃದ್ಧಿ-ಡಾಂಬರೀಕರಣ ಕಾಮಗಾರಿ ಚಾಲನೆ ನೀಡಲಾಗಿದೆ. ಹಲವು ತಿಂಗಳಿಂದ ರಸ್ತೆಯಲ್ಲಿ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಈ ಸಂಬಂಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಪ್ರಮುಖ ರಸ್ತೆಯಾಗಿದ್ದು ನಿತ್ಯ ಸಾವಿರಾರು ಜನ ಪ್ರವಾಸಿಗರು ಓಡಾಡುತ್ತಾರೆ. ಸರ್ಕಾರದ ಮೇಲೆ ಒತ್ತಡ ಹೇರಿದ ನಂತರ ಮುಖ್ಯಮಂತ್ರಿಗಳು ಸ್ಪಂದಿಸಿ ಅನುದಾನ ನೀಡಿದ್ದಾರೆ. ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ ಎಂದರು.
ಮಳವಳ್ಳಿಯಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಕೊಲೆಮಾಡಿದವಿಗೆ ಗಲ್ಲುಶಿಕ್ಷೆ ನೀಡುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡುತ್ತೇನೆ. ಕುಟುಂಬಕ್ಕೆ ಸಂಸದರ ಮನವಿ ಮೇರೆಗೆ ಮಾನ್ಯ ಮುಖ್ಯಮಂತ್ರಿಗಳು 10 ಲಕ್ಷ ರೂ. ಪರಿಹಾರ ನೀಡಿರುವುದು ಅವಮಾನದ ಸಂಗತಿ. 25 ಲಕ್ಷ ರೂ. ಪರಿಹಾರ ನೀಡಬೇಕಿತ್ತು ಎಂದರು.
ಬೆಳಗೊಳ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಬಾಕಿ ಇರುವ ಅಕ್ರಮ-ಸಕ್ರಮದಡಿ ಹಕ್ಕು ಪತ್ರಗಳನ್ನು ಶೀಘ್ರ ವಿತರಿಸಲಾಗುವುದು. ಸರ್ಕಾರದಲ್ಲಿ ಅನುದಾನದ ಕೊರತೆಯಿಂದ ವಿಶ್ವವಿಖ್ಯಾತ ಬೃಂದಾವನ ರಸ್ತೆ ಅಗಲೀಕರಣ ಮಾಡಲು ಸಾಧ್ಯವಾಗುತ್ತಿಲ್ಲ. ಈಗಿರುವ ರಸ್ತೆ ಅಭಿವೃದ್ಧಿಗೂ ಅನುದಾನ ಕೊರತೆ ಉಂಟಾಗುತ್ತಿದೆ ಎಂದರು.
ಲೋಕೋಪಯೋಗಿ ಇಲಾಖೆ ಇಇ ಭಾಸ್ಕರ್, ಎಇಇ ಮಹೇಶ್, ಎಇ ರೇವಣ್ಣ, ಜಯಶೀಲಾ, ಬೆಳಗೊಳ ಗ್ರಾಪಂ ಉಪಾಧ್ಯಕ್ಷ ರವಿಕುಮಾರ್, ಜೆಎಡಿಎಸ್ ತಾಲೂಕು ಅಧ್ಯಕ್ಷ ಪೈಲ್ವಾನ್ ಮುಕುಂದ, ಗ್ರಾಪಂ ಸದಸ್ಯರಾದ ಮುರಳಿ, ಚೆಲವರಾಜು, ಸಾಗರ್, ನಂದೀಶ್, ಬಳ್ಳಾರಿಗೌಡ, ವಿವೇಕ್, ಕೆಆರ್‌ಎಸ್ ಗ್ರಾಪಂ ಅಧ್ಯಕ್ಷ ಕೆ.ನರಸಿಂಹ, ಮುಖಂಡರಾದ ಲೋಕೇಶ್, ಸ್ವಾಮಿಗೌಡ, ಕಾಂತರಾಜು, ಉಮೇಶ, ವಾಸು, ಬಾಲು , ಡಾನ್ ಹೆನ್ರಿ, ಗುತ್ತಿಗೆದಾರ ಕರೀಗೌಡ ಇದ್ದರು.