ಜಿಲ್ಲೆ

ಪಾಲಕರು ಸಹಕಾರ ನೀಡಿದರೆ ಶಾಲೆಗಳ ಪ್ರಗತಿ

ಹಿರೀಸಾವೆ: ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಭವಿಷ್ಯವು ಉತ್ತಮವಾಗಿ ರೂಪುಗೊಳ್ಳಲು ಶಿಕ್ಷಕರ ಪರಿಶ್ರಮದ ಜತೆಗೆ ಪಾಲಕರ ಪಾತ್ರವೂ ಪ್ರಮುಖ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಅನಿಲ್ ಕುಮಾರ್ ಹೇಳಿದರು.


ಹೋಬಳಿಯ ಮೂಕಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಉಚಿತ ಬ್ಯಾಗ್ ಹಾಗೂ ನೋಟ್‌ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಪಾಲಕರು ಸಹಕಾರ ನೀಡಿದಷ್ಟು ಶಾಲೆಗಳು ಪ್ರಗತಿಯತ್ತ ಸಾಗುತ್ತವೆ. ಶೈಕ್ಷಣಿಕ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸರ್ಕಾರವೂ ಸಾಕಷ್ಟು ಯೋಜನೆಗಳನ್ನು ರೂಪಿಸಿ ಉಚಿತವಾಗಿ ಕಲ್ಪಿಸುತ್ತಿದೆ. ಅದರ ಜತೆಗೆ ಪಾಲಕರು ಸಹಕಾರ ನೀಡಿದರೆ ಶಾಲೆಗಳು ಅಭಿವೃದ್ಧಿಗೊಳ್ಳಲಿವೆ ಎಂದು ಹೇಳಿದರು.


ಯುವ ಸಾಮ್ರಾಜ್ಯ ಸಂಘಟನೆಯ ಅಧ್ಯಕ್ಷ ಮಲ್ಲೇಶ್‌ಗೌಡ ಮಾತನಾಡಿ, ಶಾಲೆಯ ಹಳೆಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಗಳ ಕಡೆ ಗಮನಹರಿಸಿ ಅಭಿವೃದ್ಧಿಗೆ ಸಹಕಾರ ನೀಡಬೇಕು. ಇದರಿಂದ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.


ಶ್ರೀ ಉಡುಸಲಮ್ಮ ಎಂಟರ್‌ಪ್ರೈಸಸ್ ವತಿಯಿಂದ ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗ್, ಟ್ರ್ಯಾಕ್ ಸೂಟ್, ಶೂ-ಸಾಕ್ಸ್, ಸಮವಸ್ತ್ರ ಹಾಗೂ ನೋಟ್ ಬುಕ್‌ಗಳನ್ನು ನೀಡಲಾಯಿತು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಎಸ್‌ಡಿಎಂಸಿ ಅಧ್ಯಕ್ಷೆ ನಾಗವೇಣಿ, ಉಪಾಧ್ಯಕ್ಷ ಮೋಹನ್‌ಕುಮಾರ್, ಸಿಆರ್‌ಪಿ ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಪಾಂಡುರಂಗಯ್ಯ, ಶಾಲಾ ಮುಖ್ಯ ಶಿಕ್ಷಕ ಜೆ.ಎಚ್.ಕಾಂತ, ದಾನಿಗಳಾದ ಮಲ್ಲೇಶ್‌ಗೌಡ, ಸಂತೋಷ್, ನವೀನ್, ಪುನೀತ್, ಎಸ್‌ಡಿಎಂಸಿ ನಿರ್ದೇಶಕರು, ಶಿಕ್ಷಕರು ಇದ್ದರು.