ಜಿಲ್ಲೆ

ಪಾಲಕರ ಮೌಲ್ಯಯುತ ಬದುಕು ಮಕ್ಕಳ ದಾರಿ ದೀಪವಾಗಲಿದೆ: ಪ್ರಮೋದ್

ಚನ್ನರಾಯಪಟ್ಟಣ: ಪಾಲಕರ ಮೌಲ್ಯಯುತ ಬದುಕು ಮಕ್ಕಳ ದಾರಿ ದೀಪವಾಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಅಧ್ಯಕ್ಷ ಪ್ರಮೋದ್ ಹೇಳಿದರು.


ತಾಲೂಕಿನ ಹಿರೀಸಾವೆ ಗ್ರಾಮದ ಶಾಸಕರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಾಲಕರ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವುದು ಪಾಲಕರ ಜವಾಬ್ದಾರಿ ಎಂದರು.


ಶಿಕ್ಷಣವು ವಿನಯತೆಯನ್ನು ಕಲಿಸಿದರೆ ಕ್ರೀಡೆ ಹಾಗೂ ಪ್ರತಿಭೆಯು ಉತ್ತಮ ಹೆಸರಿನೊಂದಿಗೆ ಕೀರ್ತಿಯನ್ನು ತಂದುಕೊಡಲಿದೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಹೆಸರು ಮಾಡಿರುವವರಲ್ಲಿ ಗ್ರಾಮೀಣ ಪ್ರತಿಭೆಗಳ ಸಾಧನೆ ಒಂದು ಇತಿಹಾಸ ಎಂದು ತಿಳಿಸಿದರು.


ಯೋಗಾ ಅಥವಾ ಧ್ಯಾನದ ಜತೆಗೆ ವ್ಯಾಯಾಮವನ್ನು ಪ್ರತಿದಿನದ ಚಟುವಟಿಕೆಯಾಗಿ ರೂಢಿಸಿಕೊಂಡಲ್ಲಿ ಕ್ರೀಡೆಗಳಲ್ಲಿ ಪಾಲ್ಗೊಂಡು ಸುಲಭದಲ್ಲಿ ಗೆಲುವು ಕಾಣಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಸೊಗಡಿನ ಬಹುತೇಕ ಕ್ರೀಡೆಗಳು ಕಣ್ಮರೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.


ಕ್ರೀಡಾ ವಿವಿರ: ಮ್ಯೂಜಿಕಲ್ ಚೇರ್‌ನಲ್ಲಿ ಶೃತಿ(ಪ್ರಥಮ), ರಮ್ಯ(ದ್ವಿತೀಯ), ಮೆಮೋರಿ ಟೆಸ್ಟ್-ದವ್ಯ(ಪ್ರಥಮ), ಮಧುಶ್ರೀ(ದ್ವಿತೀಯ), ಬೆಲೂನ್ ಒಡೆಯುವುದು-ನಿಶ್ಚಿತ(ಪ್ರಥಮ), ರೋಜಾ(ದ್ವಿತೀಯ), ಲೆಮೆನ್ ಆನ್ ದಿ ಸ್ಪೂನ್-ಸವಿತಾ(ಪ್ರಥಮ), ಮಹಾಲಕ್ಷ್ಮೀ(ದ್ವಿತೀಯ), ಬಕೆಟ್‌ಗೆ ಬಾಲ್ ಹಾಕುವುದು-ರಘುಶೆಟ್ಟಿ(ಪ್ರಥಮ), ಪ್ರದೀಪ್(ದ್ವಿತೀಯ) ಹಾಗೂ ಫನ್ನಿ ಗೇಮ್‌ನಲ್ಲಿ ಮಂಜುನಾಥ್(ಪ್ರಥಮ) ಮತ್ತು ನಟರಾಜ್ ದ್ವಿತೀಯ ಸ್ಥಾನಕ್ಕೆ ಭಾಜನರಾದರು.


ಶಾಲಾ ಮುಖ್ಯಶಿಕ್ಷಕ ಎಲ್.ಎಸ್.ಧರ್ಮೇಶ್, ಎಸ್‌ಡಿಎಂಸಿ ಅಧ್ಯಕ್ಷ ತೇಜೇಶ್, ಉಪಾಧ್ಯಕ್ಷೆ ಸೀಮಾ, ಸಹಶಿಕ್ಷಕರಾದ ಶೋಭಾ, ವಿನಯ್ ಎಂ.ಗುನಗ ಹಾಗೂ ಇತರರು ಇದ್ದರು.