ಜಿಲ್ಲೆ

ಪಾಲಕರ ಅನುಮತಿ ಪತ್ರ ಕಡ್ಡಾಯ

ಬೀದರ್: 9ನೇ ತರಗತಿಯ ವಿದ್ಯಾಗಮ ಹಾಗೂ ಎಸ್ಸೆಸ್ಸೆಲ್ಸಿ ತರಗತಿಗಳು ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲಕರ ಅನುಮತಿ ಪತ್ರ ಪಡೆದುಕೊಂಡು ಬರಬೇಕು ಎಂದು ಜನ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ತಿಳಿಸಿದರು.

ನಗರದ ಪ್ರತಾಪನಗರದ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಆರೋಗ್ಯದ ಹಿತ ದೃಷ್ಟಿಯಿಂದ ಶಾಲೆಗೆ ಊಟ, ಉಪಾಹಾರ ತರುವುದನ್ನು ನಿರ್ಬಂಧಿಸಲಾಗಿದೆ. ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಿರಂತರ ನಿಗಾ ಇಡುವುದಕ್ಕಾಗಿಯೇ ಇಬ್ಬರು ಶಿಕ್ಷಕರನ್ನು ನಿಯೋಜಿಸಲಾಗಿದೆ. ಶಾಲೆ ಮುಗಿದ ನಂತರ ನಿತ್ಯ ಶಿಕ್ಷಕರು ಪಾಲಕರನ್ನು ಸಂಪರ್ಕಿಸಿ ಮಕ್ಕಳ ಆರೋಗ್ಯ ಹಾಗೂ ಶೈಕ್ಷಣಿಕ ಪ್ರಗತಿ ಕುರಿತು ಮಾಹಿತಿ ಪಡೆಯಲಿದ್ದಾರೆ ಎಂದು ಹೇಳಿದರು.

ಜ.1 ರಿಂದ ಎಸ್ಸೆಸ್ಸೆಲ್ಸಿ ತರಗತಿ ಹಾಗೂ 6ರಿಂದ 6ನೇ ತರಗತಿಯಿಂದ 9ನೇ ವರೆಗಿನ ವಿದ್ಯಾಗಮ ತರಗತಿಗಳು ಆರಂಭವಾಗಲಿವೆ. ಕರೊನಾ ಪ್ರಯುಕ್ತ ಶಾಲೆಯಲ್ಲಿ ಸರ್ಕಾರದ ಎಲ್ಲ 12 ನಿಯಮ ಪಾಲಿಸಲಾಗುವುದು. ಮಾಸ್ಕ್ ಧರಿಸಿಕೊಂಡು ಬಂದವರಿಗೆ ಮಾತ್ರ ಶಾಲೆಯಲ್ಲಿ ಪ್ರವೇಶ ಕಲ್ಪಿಸಲಾಗುವುದು. ಪ್ರವೇಶ ದ್ವಾರದಲ್ಲೇ ವಿದ್ಯಾರ್ಥಿಗಳ ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಕೈಗೆ ಸ್ಯಾನಿಟೈಸರ್ ಹಾಕಿ ಒಳಗೆ ಬಿಡಲಾಗುವುದು ಎಂದು ತಿಳಿಸಿದರು.

ಜನ ಸೇವಾ ಪ್ರತಿಷ್ಠಾನದ ನಿರ್ದೇಶಕ ಬಿ.ಎಸ್. ಕುದರೆ, ಶಾಲೆ ಆಡಳಿತಾಧಿಕಾರಿ ಸೌಭಾಗ್ಯವತಿ ಮಾತನಾಡಿದರು. ಮುಖ್ಯ ಶಿಕ್ಷಕಿ ನೀಲಮ್ಮ ಚಾಮರೆಡ್ಡಿ, ಅನಿತಾ, ರೂಪಾ, ಲಕ್ಷ್ಮಣ ಯರನಳ್ಳಿ, ವಾಮನ ಮಾನೆ, ರಾಹುಲ್, ಶಿವಾನಂದ ಇದ್ದರು.