ಜಿಲ್ಲೆ

ಪಾರ್ಶ್ವನಾಥ ಜಯಂತಿ ಅದ್ದೂರಿ ಆಚರಣೆ

ಚಿತ್ರದುರ್ಗ: ಜೈನ ಧರ್ಮದ 23ನೇ ತೀರ್ಥಂಕರ ಭಗವಾನ್ ಪಾರ್ಶ್ವನಾಥ ಜಯಂತಿಯನ್ನು ಬುಧವಾರ ಸಮುದಾಯದವರು ಅದ್ದೂರಿಯಾಗಿ ಆಚರಿಸಿದರು.

ಜಯಂತಿ ಅಂಗವಾಗಿ ಪಾರ್ಶ್ವನಾಥರ ಪ್ರತಿಮೆ, ಭಾವಚಿತ್ರವನ್ನು ಅಲಂಕರಿಸಿ, ಟ್ರಾೃಕ್ಟರ್‌ನೊಳಗೆ ಪ್ರತಿಷ್ಠಾಪಿಸಿದ ನಂತರ ಮೆರವಣಿಗೆಗೆ ಚಾಲನೆ ದೊರೆಯಿತು.

ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ವಿಜೃಂಭಣೆಯ ಮೆರವಣಿಗೆಯಲ್ಲಿ ಮಂತ್ರಘೋಷ, ಮಂಗಳವಾದ್ಯ ಮೊಳಗಿದವು. ಡೋಲು ವಾದ್ಯ ಗಮನ ಸೆಳೆಯಿತು. ಸಂಪ್ರದಾಯದಂತೆ ಪೂಜೆಗಳು ನೆರವೇರಿದವು.

ಲಕ್ಷ್ಮೀಬಜಾರ್ ರಸ್ತೆಯ ಜೈನ ಮಂದಿರದಿಂದ ಆರಂಭವಾದ ಮೆರವಣಿಗೆ ಗಾಂಧಿ ವೃತ್ತ, ಬಿ.ಡಿ.ರಸ್ತೆ, ಪ್ರವಾಸಿ ಮಂದಿರ, ಮಹಾವೀರ, ಮದಕರಿನಾಯಕ ವೃತ್ತ, ರಂಗಯ್ಯನ ಬಾಗಿಲು, ದೊಡ್ಡಪೇಟೆ, ಚಿಕ್ಕಪೇಟೆ ಮಾರ್ಗವಾಗಿ ಸಂಚರಿಸಿ ದೇಗುಲ ತಲುಪಿತು.

ಈ ಜಯಂತಿಯೂ ಜೈನರ ಪ್ರಮುಖ ಆಚರಣೆಯಾಗಿದ್ದು, ಹಿರಿಯರಿಂದ ಕಿರಿಯರವರೆಗೂ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಶ್ರದ್ಧಾ-ಭಕ್ತಿಯಿಂದ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು.