ಮೂಡಲಗಿ: ಅರಬಾವಿಯ ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಾರ್ಥೇನಿಯಂ ನಿರ್ಮೂಲನೆ ಜಾಗೃತಿ ಕಾರ್ಯಕ್ರಮಕ್ಕೆ ಮಹಾವಿದ್ಯಾಲಯದ ಡೀನ್ ಡಾ. ಎಂ.ಜಿ. ಕೆರುಟಗಿ ಚಾಲನೆ ನೀಡಿದರು.
ಪ್ರಾಧ್ಯಾಪಕ ಡಾ.ವಿಜಯ ಮಹಾಂತೇಶ ಮಾತನಾಡಿ, ವಿದೇಶಿ ಕಳೆ ಪಾರ್ಥೇನಿಯಂ ಅಪಾಯಕಾರಿಯಾಗಿದ್ದು, ಇದಕ್ಕೆ ಗಜ್ಜರಿ ಕಸ, ಬಿಳಿ ಟೋಪಿ ಹಾಗೂ ಪುಡಾರಿ ಕಸ ಎಂದು ಕರೆಯುತ್ತಾರೆ. ಈ ಕಳೆ ವರ್ಷದ ಎಲ್ಲ ಕಾಲಗಳಲ್ಲೂ ಬೆಳೆಯುತ್ತದೆ. ಒಂದು ಪಾರ್ಥೇನಿಯಂ ಕಸ 5ರಿಂದ 25 ಸಾವಿರ ಬೀಜ ಉತ್ಪಾದಿಸುತ್ತದೆ.
ಆಗಸ್ಟ್ ತಿಂಗಳಲ್ಲಿ ಹುಲುಸಾಗಿ ಬೆಳೆದಿರುವುದರಿಂದ ಬೇರು ಸಮೇತ ಕೀಳುವ ಮೂಲಕ ಇದರ ಪ್ರಸಾರ ತಗ್ಗಿಸಿ ನಿರ್ಮೂಲನೆ ಮಾಡಬಹುದು. ಕಳೆ ಚಿಕ್ಕದಿದ್ದಾಗಲೇ ಕೀಳುವುದರಿಂದ ಬೀಜೋತ್ಪಾದನೆ ಕಡಿಮೆಯಾಗುತ್ತದೆ ಎಂದರು. ಡಾ.ವಿಜಯ ಮಹಾಂತೇಶ ಮತ್ತು ಡಾ.ಮಂಜುಳಾ ಕರಡಿಗುದ್ದಿ ಇತರರಿದ್ದರು.