ಕುಶಾಲನಗರ: ಕುಶಾಲನಗರದ ಪುರಸಭೆಯ ಪ್ರಥಮ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬದ್ರುನ್ನಿಸ ಲೇಔಟ್‌ನ ಪಾರ್ಕ್ ಜಾಗಕ್ಕಾಗಿ ಸೋಮವಾರ ಸರ್ವೇ ಇಲಾಖೆಯ ಅಧಿಕಾರಿಗಳು ಸರ್ವೇ ನಡೆಸಿ ಗಡಿ ಗುರುತು ಮಾಡಿದ್ದಾರೆ ಎಂದು ಅಧ್ಯಕ್ಷ ಬಿ.ಜಯವರ್ಧನ ತಿಳಿಸಿದ್ದಾರೆ.
ಪುರಸಭೆಯ ಸಭೆಯ ತೀರ್ಮಾನದಂತೆ ಖಾಸಗಿ ಸರ್ವೇಯನ್ನೂ ಮಾಡಿಸಲಾಗುತ್ತದೆ. ಆದರೂ ಸಮಾಧಾನವಾಗದಿದ್ದರೆ ಸ್ಯಾಟಲೈಟ್ ಸರ್ವೇ ಮಾಡಿಸಲಾಗುವುದು. ಏನೇ ಆದರೂ ಬದ್ರುನ್ನಿಸಾ ಲೇಔಟ್‌ನ ಪಾರ್ಕ್ ಜಾಗವನ್ನು ಉಳಿಸಿಕೊಳ್ಳಲಾಗುತ್ತದೆ. ಪಾರ್ಕ್ ಜಾಗಕ್ಕೆ ಬೇಲಿ ಹಾಕದಿರುವುದು ಇಷ್ಟೆಲ್ಲಾ ರದ್ಧಾಂತಕ್ಕೆ ಕಾರಣವಾಗಿದೆ. ಒಮ್ಮೆ ಪಂಚಾಯಿತಿ ವತಿಯಿಂದ ಪಾರ್ಕ್ ಜಾಗ ಅಂತ ಫಲಕ ಹಾಕಿದ್ದರು. ಕುಶಾಲನಗರ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಇತ್ತೀಚೆಗೆ ಹಾಕಿದ್ದ ಫಲಕ ತೆರವುಗೊಳಿಸಿದ್ದರು. ಅಲ್ಲಿಂದ ಆರಂಭವಾದ ಈ ಗೊಂದಲ ಮುಂದಿನ ಒಂದು ವಾರದಲ್ಲಿ ಬಗರೆಹರಿಯುವ ಅಂತ್ಯವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.