ಚಿಕ್ಕಬಳ್ಳಾಪುರ: ಪ್ರವಾಸಿಗರ ಅನುಕೂಲಕ್ಕಾಗಿ ತಾಲೂಕಿನ ನಂದಿ ಬೆಟ್ಟದ ತಪ್ಪಲಿನಲ್ಲಿ ನೂತನ ಪಾರ್ಕಿಂಗ್ ವ್ಯವಸ್ಥೆಗೆ ನಿಗದಿಪಡಿಸಿರುವ 7 ಎಕರೆ ಜಾಗವನ್ನು ಜಿಲ್ಲಾಧಿಕಾರಿ ಆರ್.ಲತಾ ಭಾನುವಾರ ಪರಿಶೀಲಿಸಿದರು.
ಪರಿಸರ ಸಂರಕ್ಷಣೆ, ವಾಹನ ಹಾಗೂ ಜನಸಂದಣಿ ನಿಯಂತ್ರಿಸುವ ಉದ್ದೇಶದಿಂದ ಜು.19 ರಿಂದ ಬೆಟ್ಟದ ಮೇಲಿನ ವಾಹನ ನಿಲ್ದಾಣದಲ್ಲಿ, ವಾಹನ ನಿಲುಗಡೆ ಸಾಮರ್ಥ್ಯಕ್ಕನುಗುಣವಾಗಿ ಪ್ರವಾಸಿಗರ ಭೇಟಿಗೆ ಅವಕಾಶ ನೀಡಲಾಗುವುದು. ಹೊಸ ನಿಯಮ ಜಾರಿಗೆ ತರುತ್ತಿರುವ ಹಿನ್ನೆಲೆಯಲ್ಲಿ, ನೂತನ ವ್ಯವಸ್ಥೆ ಸಮರ್ಪಕವಾಗಿ ಜಾರಿಯಾಗುವವರೆಗೂ ಹಾಗೂ ವಾರಾಂತ್ಯದಲ್ಲಿ ನಂದಿಬೆಟ್ಟ ಭೇಟಿಯನ್ನು ಪ್ರವಾಸಿಗರು ಸ್ವಲ್ಪ ದಿನಗಳ ಮಟ್ಟಿಗೆ ಮುಂದೂಡುವುದು ಒಳ್ಳೆಯದು ಲತಾ ತಿಳಿಸಿದರು.
ಪ್ರವೇಶ ಪಾಸ್ ವಿತರಣೆ ಪ್ರಕ್ರಿಯೆ ಒಂದೆರಡು ವಾರ ಅಪ್‌ಲೈನ್‌ನಲ್ಲಿ ನಡೆಯಲಿದೆ, ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಆನ್‌ಲೈನ್ ಮೂಲಕ ನಿರ್ವಹಿಸಲಾಗುವುದು. ಪ್ರವಾಸಿಗರು ಕರೊನಾ ನಿಯಂತ್ರಣ ಮಾರ್ಗಸೂಚಿ ಕ್ರಮಗಳನ್ನು ಪಾಲಿಸಬೇಕು. ಪಾಸ್ ಪಡೆಯಲು ತುಸು ವಿಳಂಬವಾದರೂ ತಾಳ್ಮೆ ತೋರಬೇಕು ಎಂದು ತಿಳಿಸಿದರು.
ತೋಟಗಾರಿಕಾ ಇಲಾಖೆಯ ವಿಶೇಷ ಅಧಿಕಾರಿ ಗೋಪಾಲ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜಿತೇಂದ್ರನಾಥ್ ಮತ್ತಿತರರು ಇದ್ದರು.