ಜಿಲ್ಲೆ

ಪಾರದರ್ಶಕವಾಗಿ ಮತ್ತೊಮ್ಮೆ ಜಾತಿ ಸಮೀೆ ಮಾಡಿಸಿ

ತುಮಕೂರು: ಹತ್ತು ವರ್ಷಗಳ ಹಿಂದಿನ ಜಾತಿ ಗಣತಿ ವರದಿ ಗೊಂದಲದ ಗೂಡಾಗಿದ್ದು, ಪಾರದರ್ಶಕವಾಗಿ ಮತ್ತೊಮ್ಮೆ ಸಮೀೆ ಮಾಡಿಸಿ, ನಿಮ್ಮ ಕಾಲದಲ್ಲೇ ಪ್ರಕಟಿಸಿ ಅದರ ಶ್ರೇಯವನ್ನು ಸಿದ್ದರಾಮಯ್ಯನವರೇ ತೆಗೆದುಕೊಳ್ಳಲಿ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಗುಬ್ಬಿ ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿನ ಜಾತಿ ಗಣತಿಯನ್ನು ಸಾರಾಸಗಟಾಗಿ ತಿರಸ್ಕರಿಸಲಾಗುವುದು. ಈ ವರದಿಗೆ 10 ವರ್ಷವೇ ಕಳೆದಿದ್ದು, ಸಿದ್ದರಾಮಯ್ಯ ಇನ್ನೂ ಹಳೆಯ ಗಣತಿಯನ್ನಿಟ್ಟುಕೊಂಡು ಅದೇ ಲೆಕ್ಕಾಚಾರದಲ್ಲೇ ಇದ್ದಾರೆ ಎನ್ನುವುದು

ನನ್ನ ಭಾವನೆ. ಈ ಹಿಂದೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಸಹಿ ಹಾಕದೇ ಓಡಿ ಹೋದರು. ಬಿಜೆಪಿ ಅವಧಿಯಲ್ಲಿ ಜಯಪ್ರಕಾಶ್​ ಹೆಗ್ಡೆ ಅವರನ್ನು ಆ ಸ್ಥಾನಕ್ಕೆ ಕರೆತರಲಾಗಿತ್ತಾದರೂ ಯಾವುದೇ ಬದಲಾವಣೆ ಆಗಲಿಲ್ಲ. ಎಲ್ಲರಲ್ಲೂ ಸ್ವಾರ್ಥ ತುಂಬಿದೆ ಎಂದರು.

ಜಾತಿಗಣತಿ ವರದಿ ಜಾರಿಯಿಂದ ಯಾರಿಗೆ ತೊಂದರೆ ಎನ್ನುವುದಕ್ಕಿಂತ ಗೊಂದಲಗೂಡಾಗಿ ಮಾರ್ಪಟ್ಟಿದೆ. ವರದಿ ತಿರಸ್ಕಾರ ಮಾಡಿ. ಮತ್ತೊಮ್ಮೆ ಸಾಮಾಜಿಕ, ಆರ್ಥಿಕ ಸಮೀೆ ಮಾಡಿ. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎನ್ನುವಂತೆ ಮಾಡಬೇಡಿ. ಇಷ್ಟೆಲ್ಲ ಗೊಂದಲವಿಟ್ಟುಕೊಂಡು ವರದಿ ಜಾರಿ ಮಾಡಿದರೆ ಜೇನುಗೂಡಿಗೆ ಕೈ ಹಾಕಿದಂತೆ ಎಂದು ಎಚ್ಚರಿಸಿದರು.

ಇದರಿಂದೇನು ಪ್ರಪಂಚ ಮುಳುಗಿ ಹೋಗೋದಿಲ್ಲ. ಸಿದ್ದರಾಮಯ್ಯ ಅರಿವು ಉಳ್ಳವರಾಗಿ ಹೀಗೆ ಮಾಡಬೇಡಿ. ಒಂದೂವರೆ ವರ್ಷಗಳ ಕಾಲ ಸಮಯ ಕೊಟ್ಟು ಮತ್ತೊಮ್ಮೆ ಸರ್ವೇ ಮಾಡಿ. ಆಗ ದೇವರಾಜ ಅರಸುರಂತೆ ನಿಮ್ಮನ್ನು ನೆನಪು ಮಾಡಿಕೊಳ್ಳುತ್ತೀವಿ. ಅದನ್ನು ಬಿಟ್ಟು ಈ ವರದಿಯನ್ನು ಜಾರಿ ಮಾಡಿ ಖಳನಾಯಕರಾಗಬೇಡಿ ಎಂದು ಸೋಮಣ್ಣ ಹೇಳಿದರು.