ಜಿಲ್ಲೆ

ಪಾರದರ್ಶಕ ಆಡಳಿತ ರಚಿಸಲು ಕಡ್ಡಾಯವಾಗಿ ಮತದಾನ ಮಾಡಿ ; ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್.ಸಂಗ್ರೇಶಿ ಸಲಹೆ

ತುಮಕೂರು: ಪಾರದರ್ಶಕ ಆಡಳಿತ ರಚಿಸಲು ಸಂವಿಧಾನವು ಎಲ್ಲರಿಗೂ ಅತ್ಯಮೂಲ್ಯವಾದ ಮತದಾನದ ಹಕ್ಕು ನೀಡಿದ್ದು ಪ್ರತಿಯೊಬ್ಬರು ಮತದಾನವನ್ನು ಶ್ರೇಷ್ಠ ಕಾರ್ಯವೆಂದು ಭಾವಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್.ಸಂಗ್ರೇಶಿ ಹೇಳಿದರು.

ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕೇಂದ್ರ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ 11ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಪಾತ್ರ ಮಹತ್ತರವಾದುದು. ದೇಶದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬ ಯುವಕ-ಯುವತಿಯರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.

ಜಾತಿ, ಮತ, ಭೇದ-ಭಾವ, ಲಿಂಗ ತಾರತಮ್ಯ ಎಲ್ಲವನ್ನೂ ಬದಿಗೊತ್ತಿ ಸಂವಿಧಾನದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಮತದಾನದ ಹಕ್ಕುನ್ನು ನೀಡಲಾಗಿದೆ. 1950ರ ಜನವರಿ 25ರಂದು ಕೇಂದ್ರ ಚುನಾವಣಾ ಆಯೋಗವು ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಈ ದಿನದಂದು ‘ರಾಷ್ಟ್ರೀಯ ಮತದಾರರ ದಿನ’ ಆಚರಿಸಲಾಗುತ್ತಿದೆ. ಆದರೆ, 2011 ರಿಂದ ಈ ದಿನವನ್ನು ಮತದಾನದ ಯಶಸ್ವಿಗಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ರಾಘವೇಂದ್ರ ಶೆಟ್ಟಿಗಾರ್ ಹೇಳಿದರು.

ಇಡೀ ವಿಶ್ವವೇ ನಮ್ಮ ಸಂವಿಧಾನದ ಆಶಯ ಅಳವಡಿಸಿಕೊಂಡಿವೆ. ಮೊಟ್ಟ ಮೊದಲನೆಯದಾಗಿ ಸಮಾನವಾದ ಮತದಾನದ ಹಕ್ಕು ಕೊಟ್ಟ ದೇಶ ನಮ್ಮದು. ಹೆಣ್ಣು ಮಕ್ಕಳಿಗೂ ಮತದಾನ ಹಕ್ಕನ್ನು ಸಂವಿಧಾನ ಕಲ್ಪಿಸಿ ಕೊಟ್ಟಿರುವುದು ಹೆಮ್ಮೆ ಪಡುವಂತಹದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ತಿಳಿಸಿದರು.

ಚುನಾವಣಾ ಆಯೋಗ ಪ್ರತಿ ವರ್ಷ ಹೊಸ ಮತದಾರರ ಸೇರ್ಪಡೆಗೆ ಕ್ರಮ ವಹಿಸುತ್ತಿರವುದರಿಂದ ಕಳೆದ 2 ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 27000 ಹೊಸ ಮತದಾರರು ನೋಂದಾಯಿಸಿಕೊಂಡಿದ್ದಾರೆ. ಮತಪಟ್ಟಿಗೆ ನೋಂದಣಿ ಪ್ರಕ್ರಿಯೆಯು ಪ್ರತೀ ವರ್ಷದ ಜುಲೈನಿಂದ ಪ್ರಾರಂಭಿಸಲಾಗುವುದು. ಅದರಂತೆ ಜುಲೈನಿಂದ ಈವರೆಗೆ 2021ರ ಜನವರಿ 1ಕ್ಕೆ 18 ವರ್ಷ ಪೂರ್ಣಗೊಂಡ 67819 ಅರ್ಹ ಮತದಾರರನ್ನು ನೋಂದಾಯಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಪ್ರತಿಜ್ಞಾ ವಿಧಿ ಭೋದಿಸಿದರು. ಕಾರ್ಯಕ್ರಮದಲ್ಲಿ ಹೊಸದಾಗಿ ಮತದಾನದ ಹಕ್ಕು ಪಡೆಯಲು ನೋಂದಾಯಿತರಾಗಿದ್ದ ಯುವ ಮತದಾರರಿಗೆ ಎಪಿಕ್ ಕಾರ್ಡ್ ವಿತರಿಸಲಾಯಿತು.

ಉಪವಿಭಾಗಾಧಿಕಾರಿ ವಿ.ಅಜಯ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನರಸಿಂಹಮೂರ್ತಿ, ಜಿಪಂ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಚುನಾವಣಾ ಶಾಖೆಯ ನಾಗಭೂಷಣ್ ಮತ್ತಿತರರಿದ್ದರು.

ಗ್ರಾಮೀಣಭಾಗದಲ್ಲಿ ಮತದಾನ ಹೆಚ್ಚಳ: ಕಳೆದ ಡಿಸೆಂಬರ್‌ನಲ್ಲಿ ನಡೆದ ಗ್ರಾಪಂ ಚುನಾವಣೆಯಲ್ಲಿ ಶೇ.78 ಮತದಾನವಾಗಿರುವುದನ್ನು ಅವಲೋಕಿಸಿದಾಗ ಗ್ರಾಮೀಣ ಭಾಗಗಳಲ್ಲಿ ಮತದಾನದ ಪ್ರಮಾಣ ಹೆಚ್ಚಾಗಿದೆ. ಆದರೆ, ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕುಂಠಿತವಾಗುತ್ತಿದ್ದು, ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯುವ ಮತದಾರರು, ಕಾಲೇಜು ವಿದ್ಯಾರ್ಥಿಗಳು ಮತದಾನದ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಸಲಹೆಯಿತ್ತರು.