ಜಿಲ್ಲೆ

ಪಾರದರ್ಶಕ ಅಭಿವೃದ್ಧಿಯಿಂದ ಯೋಜನೆ ಸಾರ್ಥಕತೆ

ಚಿಕ್ಕಬಳ್ಳಾಪುರ: ಸರ್ಕಾರದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ನಿರ್ದಿಷ್ಟ ಗುರಿ ಸಾಧಿಸುವಂತೆ ಜಿಪಂ ಸಿಇಒ ಬಿ.ಫೌಜೀಯಾ ತರನ್ನುಮ್ ಅಧಿಕಾರಿಗಳಿಗೆ ಸೂಚಿಸಿದರು.

ಜಿ.ಪಂ.ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನೆ ಸಂಸ್ಥೆಯ ಸಿಬ್ಬಂದಿ ತರಬೇತಿ ಉದ್ಘಾಟಿಸಿ ಮಾತನಾಡಿದರು. ಯಾವುದೇ ಯೋಜನೆ ಮತ್ತು ಕಾರ್ಯಕ್ರಮಗಳು ಘೋಷಣೆಗೆ ಮಾತ್ರ ಸೀಮಿತವಾಗಬಾರದು. ಸಕಾಲಕ್ಕೆ ಅರ್ಹ ಫಲಾನುಭವಿಗಳಿಗೆ ಅಗತ್ಯ ನೆರವು ಒದಗಿಸುವುದು ಮುಖ್ಯ. ಹಾಗೆಯೇ ಪಾರದರ್ಶಕ ಅಭಿವೃದ್ಧಿಯನ್ನೂ ಕಾಣಬೇಕು. ಆಗ ಮಾತ್ರ ಉದ್ದೇಶಿತ ಯೋಜನೆಗೆ ಸಾರ್ಥಕತೆ ಬರುತ್ತದೆ ಎಂದರು.

ಬಹಳಷ್ಟು ಜನರು ತಿಳಿವಳಿಕೆ ಕೊರತೆಯಿಂದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸೇರಿ ನಾನಾ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಇಂತಹವರನ್ನು ಗುರುತಿಸಿ, ಸಕಾಲಕ್ಕೆ ಸವಲತ್ತುಗಳನ್ನು ಒದಗಿಸಬೇಕು. ಸಮಾಜದ ಮುಖ್ಯವಾಹಿನಿಗೆ ಕರೆತರಬೇಕು, ಈ ನಿಟ್ಟಿನಲ್ಲಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ವ್ಯಾಪಕವಾಗಿ ಪ್ರಚಾರ ಕೈಗೊಂಡು ಅರಿವು ಮೂಡಿಸಬೇಕು ಎಂದು ಸೂಚಿಸಿದರು.

ಕರ್ನಾಟಕ ಸಂಜೀವಿನಿ ಯೋಜನೆಯು ಉತ್ತಮ ಕೌಶಲ ತರಬೇತಿ, ಆರ್ಥಿಕ ನೆರವು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜಿಲ್ಲೆಯಲ್ಲಿ ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವಲ್ಲಿ ಸಿಬ್ಬಂದಿ ಪಾತ್ರ ಮಹತ್ತರವಾದುದು ಎಂದರು.

ಸ್ವಸಹಾಯ ಗುಂಪು ಮತ್ತು ಒಕ್ಕೂಟಗಳ ಕಾರ್ಯನಿರ್ವಹಣೆ, ಸ್ವಯಂ ಉದ್ಯೋಗದಲ್ಲಿ ಕೈಗೊಂಡಿರುವ ಕೆಲಸ, ವೃತ್ತಿಪರ ಕೌಶಲ, ಆದಾಯ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಸದಸ್ಯರು ಸಂವಾದದಲ್ಲಿ ಅಭಿಪ್ರಾಯ ಹಂಚಿಕೊಂಡರು. ಜಿಪಂ ಉಪ ಕಾರ್ಯದರ್ಶಿ ನೊಮೇಶ್‌ಕುಮಾರ್, ಯೋಜನಾ ನಿರ್ದೇಶಕ ಕೆ.ಗಿರಿಜಾ ಶಂಕರ್, ಕಾರ್ಯಕ್ರಮ ನಿರ್ವಾಹಕ ನಿರ್ದೇಶಕ ಎಂ.ಕೆ ಆಲಿ. ಜಿಲ್, ವ್ಯವಸ್ಥಾಪಕ ಬಿರಾದರ್ ಇತರರಿದ್ದರು.

ಕರೊನಾ ನಿಯಮ ಪಾಲಿಸಿ : ಪ್ರತಿ ಗ್ರಾಮದಲ್ಲೂ ಕರೊನಾ ಸೋಂಕಿನ ಮಾರ್ಗಸೂಚಿಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಸಿಇಒ ಬಿ.ೌಜೀಯಾ ತರನ್ನುಮ್ ಸಲಹೆ ನೀಡಿದರು. ತಾಲೂಕಿನ ಮರಳಕುಂಟೆಯಲ್ಲಿ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗಗಳಲ್ಲೂ ಕರೊನಾ ಸೋಂಕು ಹೆಚ್ಚಾಗಿ ಹರಡುತ್ತಿದೆ. ಪರಸ್ಪರ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವಿಕೆ ಸೇರಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದರು. ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಯುವಲ್ಲಿ ಸ್ವಚ್ಛತೆಯು ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ವೈಜ್ಞಾನಿಕ ಕಸ ವಿಲೇವಾರಿ, ಶುದ್ಧ ನೀರಿನ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.