ಜಿಲ್ಲೆ

ಪಾರಂಪರಿಕ ವೈದ್ಯ ಸೇವೆ ಮಹತ್ವ

ಚಿತ್ರದುರ್ಗ: ಸಾರ್ವಜನಿಕರಿಗೆ ಪಾರಂಪರಿಕ ವೈದ್ಯ ಸೇವೆಯ ಅಗತ್ಯವಿದೆ ಎಂದು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಹೇಳಿದರು.
ಪಾರಂಪರಿಕ ವೈದ್ಯ ಪರಿಷತ್ ನಗರದ ಕಬೀರಾನಂದಾಶ್ರಮದಲ್ಲಿ ಶನಿವಾರ ಏರ್ಪಡಿಸಿದ್ದ ಧನ್ವಂತರಿ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಇವತ್ತಿನ ಸಂದರ್ಭದಲ್ಲಿ ಪಾರಂಪರಿಕ ವೈದ್ಯರ ಸಂಖ್ಯೆ ಕುಸಿಯುತ್ತಿದೆ. ಗಿಡ ಮೂಲಿಕೆಗಳನ್ನು ಬಳಸಿ ಚಿಕಿತ್ಸೆ ನೀಡುವಂಥ ಈ ಪದ್ಧತಿಗೆ ನೂರಾರು ವರ್ಷಗಳ ಐತಿಹ್ಯವಿದೆ. ಇದರ ಮಹತ್ವವನ್ನು ಜನರಿಗೆ ತಿಳಿಸಬೇಕಿದೆ ಎಂದರು.
ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ಜನರು ಪಾರಂಪರಿಕ ವೈದ್ಯ ಪದ್ಧ್ದತಿ ಪ್ರಯೋಜನ ಪಡೆದುಕೊಳ್ಳಬೇಕು. ಗಿಡಮೂಲಿಕೆಗಳಿಂದ ನಾನಾ ರೀತಿಯ ಕಾಯಿಲೆಗಳನ್ನು ಗುಣಪಡಿಸಬಹುದಾಗಿದೆ ಎಂದರು.
ಮೇದಾರ ಕೇತೇಶ್ವರ ಮಠದ ಶ್ರೀ ಕೇತೇಶ್ವರ ಸ್ವಾಮೀಜಿ ಮಾತನಾಡಿ, ಆಯುರ್ವೇದ ಔಷಧಕ್ಕೆ ಇಂದು ಬೇಡಿಕೆ ಇಲ್ಲದಂತಾಗಿದೆ. ಗಿಡಮೂಲಿಕೆ ಬಗ್ಗೆ ಅನಗತ್ಯ ಭಯಬೇಡ ಎಂದು ಹೇಳಿದರು.
ವೈದ್ಯರತ್ನ ಪ್ರಶಸ್ತಿ ಪುರಸ್ಕೃತ ಡಾ.ಸುದರ್ಶನ್ ಮಾತನಾಡಿ, ಪಂಚಕರ್ಮ ಚಿಕಿತ್ಸೆಯಿಂದ ಆಯಸ್ಸು ವೃದ್ಧಿಯಾಗಲಿದೆ. ಧನ್ವಂತರಿ ಆಯುರ್ವೇದದಿಂದ ಅಸಾಧ್ಯವು ಸಾಧ್ಯವಾಗುತ್ತದೆ. ಧನ್ವಂತರಿ ಎಂದರೆ ಪ್ರಕೃತಿ ಜ್ಞಾನವಾಗಿದೆ ಎಂದರು.
ಆಯುಷ್ ಆರೋಗ್ಯಾಧಿಕಾರಿ ಡಾ.ಪ್ರಶಾಂತ್‌ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 36 ಆಯುರ್ವೇದ ಆಸ್ಪತ್ರೆಗಳಿವೆ. ಪಂಚಕರ್ಮ ಚಿಕಿತ್ಸೆ ಕೂಡ ಸಿಗುತ್ತದೆ ಎಂದು ಹೇಳಿದರು.
ಪಾರಂಪರಿಕ ವೈದ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್.ರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ವೈದ್ಯರತ್ನ ಪ್ರಶಸ್ತಿ ಪುರಸ್ಕೃತ ಡಾ.ಸುದರ್ಶನ್ ಹಾಗೂ ಹಿರಿಯ ಪತ್ರಕರ್ತ ಟಿ.ಕೆ.ಬಸವರಾಜ್ ಅವರನ್ನು ಸನ್ಮಾನಿಸಲಾಯಿತು.
ಪಾರಂಪರಿಕ ವೈದ್ಯ ಮುಜೀಬ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ನರಹರಿ ಇತರರಿದ್ದರು. ಜಿ.ಎರ‌್ರಿಸ್ವಾಮಿ ಪ್ರಾರ್ಥಿಸಿದರು. ಪಾರಂಪರಿಕ ವೈದ್ಯ ಪರಿಷತ್ ಕಾರ್ಯದರ್ಶಿ ಕೆ.ವೀರಣ್ಣ ಸ್ವಾಗತಿಸಿದರು.