ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ 1 ಸಾವಿರ ಕೋಟಿ ರೂ. ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮೇಯರ್ ಶಿವಕುಮಾರ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಮೈಸೂರು ಮಹಾನಗರ ಪಾಲಿಕೆಯ ನಿಯೋಗ ಎರಡ್ಮೂರು ದಿನಗಳಲ್ಲಿ ಬೆಳಗಾವಿಗೆ ತೆರಳಿ ಈ ಕುರಿತು ಮನವಿ ಸಲ್ಲಿಸಲಾಗುವುದು ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲು ಜನಸಂಕಲ್ಪ ಯಾತ್ರೆ ಹಿನ್ನೆಲೆಯಲ್ಲಿ ಸಾಧ್ಯವಾಗಿರಲಿಲ್ಲ. ಆದ್ದರಿಂದ ಬೆಳಗಾವಿ ಅಧಿವೇಶನದ ವೇಳೆ ಸಿಎಂ ಭೇಟಿಗೆ ಕಾಲಾವಕಾಶ ಕೊಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರನ್ನು ಕೋರಿದ್ದೇನೆ ಎಂದು ತಿಳಿಸಿದರು.
ಕಟ್ಟಡಗಳ ದುರಸ್ತಿಗೆ ಮೊದಲ ಹಂತದಲ್ಲಿ 300 ಕೋಟಿ ರೂ. ನೀಡುವಂತೆ ಕೋರುತ್ತೇವೆ. ಕಟ್ಟಡಗಳ ಸಂರಕ್ಷಣೆಗೆ 2023-24ರ ಆಯವ್ಯಯದಲ್ಲಿ 1 ಸಾವಿರ ಕೋಟಿ ರೂ. ನೀಡುವಂತೆ ಕೋರಲಾಗುವುದು ಎಂದರು.
ನಗರದಲ್ಲಿ 213 ಪಾರಂಪರಿಕ ಕಟ್ಟಡಗಳಿವೆ. ಬಹುತೇಕ ಕಟ್ಟಡಗಳು ಶಿಥಿಲಗೊಂಡಿವೆ. ತುರ್ತಾಗಿ 133 ಕಟ್ಟಡಗಳನ್ನು ದುರಸ್ತಿ ಮಾಡಬೇಕು. ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಸಂಬಂಧ ಇತಿಹಾಸ ತಜ್ಞರು, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಅಧಿಕಾರಿಗಳು, ಸಾರ್ವಜನಿಕರ ಸಭೆ ನಡೆಸಲಾಗಿದೆ. ಕಟ್ಟಡಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಪಾಲಿಕೆಯಿಂದಲೇ ಪೂರ್ಣ ವರದಿ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಮೈಸೂರಿನ ಪಾರಂಪರಿಕ ಕಟ್ಟಡಗಳ ದುರಸ್ತಿಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಅವರು ಸದನದಲ್ಲಿ ಪ್ರಶ್ನೆ ಕೇಳಿದ್ದು, ಪ್ರವಾಸೋದ್ಯಮ ಸಚಿವರು ಉತ್ತರಿಸಿದ್ದಾರೆ. ಕಟ್ಟಡಗಳ ದುಸ್ಥಿತಿ ಬಗ್ಗೆ ಪ್ರವಾಸೋದ್ಯಮ ಇಲಾಖೆಗೆ ಮಾಹಿತಿ ಇದೆ. ಆದರೂ ಸಚಿವರು ವರದಿ ತರಿಸಿಕೊಳ್ಳುವುದಾಗಿ ಹೇಳಿದ್ದಾರೆ. ಅವರಿಗೂ ವರದಿ ನೀಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಶೌಚಗೃಹಗಳಿಲ್ಲದೆ ಪ್ರವಾಸಿಗರು ತೊಂದರೆ ಅನುಭವಿಸುತ್ತಿರುವ ಬಗ್ಗೆ ಮಾಹಿತಿ ಇದೆ. ಅಗತ್ಯವಿರುವ ಕಡೆ ಶೌಚಗೃಹ ನಿರ್ಮಾಣ ಸಂಬಂಧ ಅಧಿಕಾರಿಗಳಿಂದ ವರದಿ ಕೇಳಿರುವುದಾಗಿ ಮೇಯರ್ ಶಿವಕುಮಾರ್ ತಿಳಿಸಿದರು.
ಪಿಂಕ್ ಶೌಚಗೃಹ:
ಡಿ. ದೇವರಾಜ ಅರಸು ರಸ್ತೆಯ ಅಂಗಡಿ-ಮುಂಗಟ್ಟುಗಳಲ್ಲಿ ಸಾವಿರಾರು ಮಹಿಳೆಯರು ಕರ್ತವ್ಯ ನಿರ್ವಹಿಸುತ್ತಾರೆ. ಆದರೆ ಅಲ್ಲಿ ಸಾರ್ವಜನಿಕ ಶೌಚಗೃಹ ಇಲ್ಲ. ನಿರ್ವಹಣೆ ಕೊರತೆಯಿಂದ ಇ-ಶೌಚಗೃಹ ತೆರವು ಮಾಡಲಾಗಿದೆ. ಹೀಗಾಗಿ ಅರಸು ರಸ್ತೆಯಲ್ಲಿ ಪಿಂಕ್ ಶೌಚಗೃಹ ನಿರ್ಮಾಣಕ್ಕೆ ಚಿಂತನೆ ಮಾಡಿರುವುದಾಗಿ ಹೇಳಿದರು.
ಶೌಚಗೃಹದ ಕೊರತೆ, ಶುಚಿತ್ವ ಇಲ್ಲದಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಸೂಕ್ತ ರೀತಿಯಲ್ಲಿ ನಿರ್ವಹಣೆ ಆಗುತ್ತಿಲ್ಲ. ಇವುಗಳ ನಿರ್ವಹಣೆ ಕುರಿತಂತೆ ಆಯುಕ್ತರೊಂದಿಗೆ ಚರ್ಚಿಸಲಾಗುವುದು. ಈ ಸಮಸ್ಯೆಯನ್ನೂ ಶೀಘ್ರ ಬಗೆಹರಿಸುವುದಾಗಿ ನುಡಿದರು.