ಬೀದರ್: ಇಲ್ಲಿನ ಐತಿಹಾಸಿಕ ಪಾಪನಾಶ ಮಂದಿರವನ್ನು ದಿನವಿಡೀ ತೆರೆದಿಟ್ಟು ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡುವಂತೆ ಲಿಂಗಾಯತ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಜಿ.ಶೆಟಕಾರ್, ಪ್ರಧಾನ ಕಾರ್ಯದರ್ಶಿ ಸೋಮಶೇಖರ ಪಾಟೀಲ್ ಗಾದಗಿ ಆಗ್ರಹಿಸಿದ್ದಾರೆ.
ಕರೊನಾ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಬಹುತೇಕ ದೇವಸ್ಥಾನಗಳನ್ನು ಈಗ ತೆರೆಯಲಾಗಿದೆ. ನಿತ್ಯವೂ ಎಲ್ಲೆಡೆ ಮೊದಲಿನಂತೆ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಮದುವೆ ಇತರೆ ಮಂಗಲ ಸಮಾರಂಭ ಸಹ ಆಯೋಜಿಸಲಾಗುತ್ತಿದೆ. ಆದರೆ ಇಲ್ಲಿನ ಪ್ರಸಿದ್ಧ ಪಾಪನಾಶ ಮಂದಿರ ಬೆಳಗ್ಗೆ ಹಾಗೂ ಸಂಜೆ ಕೇವಲ ಒಂದು ಗಂಟೆ ತೆರೆದಿಡಲಾಗುತ್ತಿದೆ. ಉಳಿದ ಅವಧಿಯಲ್ಲಿ ಮಂದಿರ ಬಾಗಿಲು ಮುಚ್ಚಿಡುತ್ತಿರುವುದರಿಂದ ಅಪಾರ ಭಕ್ತರು ಹೊರಗಿನಿಂದಲೇ ದರ್ಶನ ಪಡೆದು ಮರಳುವಂತಾಗಿದೆ. ಸಂಬಂಧಿತರು ಈ ಬಗ್ಗೆ ಗಮನಹರಿಸಿ ಭಕ್ತರಿಗೆ ಅನುಕೂಲವಾಗಲು ದಿನವಿಡೀ ಮಂದಿರ ತೆರೆದಿಡುವಂತೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಪಾಪನಾಶ ಮಂದಿರವು ಭವ್ಯ ಇತಿಹಾಸ, ಪರಂಪರೆ ಹೊಂದಿದೆ. ಕರ್ನಾಟಕವಲ್ಲದೆ, ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ಸೇರಿದಂತೆ ನಾನಾ ಕಡೆಗಳಿಂದ ಅಪಾರ ಭಕ್ತರು ಇಲ್ಲಿನ ಶಿವಲಿಂಗ ದರ್ಶನ ಪಡೆಯಲು ನಿತ್ಯ ಆಗಮಿಸುತ್ತಾರೆ. ಮದುವೆ, ಶಾಲು ಮತ್ತಿತರ ಮಂಗಲ ಕಾರ್ಯಕ್ರಮ ನಡೆಸುವ ಮುನ್ನ ದೇವರ ದರ್ಶನ ಪಡೆಯುವ ಪದ್ಧತಿಯೂ ಇದೆ. ಆದರೆ ಮಂದಿರದ ಬಾಗಿಲು ಬೆಳಗ್ಗೆ, ಸಂಜೆ ಕೇವಲ ಒಂದು ಗಂಟೆ ತೆರೆದಿಡಲು ಸಮಯ ನಿಗದಿಪಡಿಸಿರುವುದು ಸರಿಯಲ್ಲ ಎಂದಿದ್ದಾರೆ. ಮಂದಿರದ ಗರ್ಭಗುಡಿ ಸಮ್ಮುಖದಲ್ಲಿರುವ ದಾನ ಪೆಟ್ಟಿಗೆ ಹೊರಗಿನಿಂದ ದರ್ಶನ ಪಡೆಯುವವರಿಗೆ ಅಡ್ಡಿಯಾಗುತ್ತಿದೆ. ಇದನ್ನು ಎದುರಿನಿಂದ ಬೇರೆಡೆ ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ.