ಜಿಲ್ಲೆ

ಪಾನಿಪುರಿ ತಿಂದು 25ಕ್ಕೂ ಹೆಚ್ಚು ಜನ ಅಸ್ವಸ್ಥ

ಬುಕ್ಕಾಪಟ್ಟಣ: ಶಿರಾ ತಾಲೂಕು ಬುಕ್ಕಾಪಟ್ಟಣದಲ್ಲಿ ಪಾನಿಪುರಿ ತಿಂದ 25ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಸೋಮವಾರ ಸಂಜೆ ಎಸ್​ಬಿಐ ಬ್ಯಾಂಕಿನ ಆವರಣದಲ್ಲಿ ರಾಜಸ್ಥಾನ ಮೂಲದ ಮುಖೇಶ್​ ಎಂಬವವರ ಅಂಗಡಿಯಲ್ಲಿ ಪಾನಿಪೂರಿ ತಿಂದ 25ಕ್ಕೂ ಹೆಚ್ಚು ಜನರಿಗೆ ರಾತ್ರಿ ಹೊಟ್ಟೆ ನೋವು, ವಾಂತಿ ಭೇದಿ ಕಾಣಿಸಿಕೊಂಡಿದ್ದು, ಬುಕ್ಕಾಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಸುದ್ದಿ ತಿಳಿದು ಬುಕ್ಕಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿಗಳು ಅಂಗಡಿ ಪರಿಶೀಲಿಸಿ ಮಾಲೀಕನಿಗೆ ನೋಟಿಸ್​ ನೀಡಿ ಪಾನಿಪುರಿಗೆ ಬಳಸಿದ್ದ ಪದಾರ್ಥಗಳ ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಕೊಂಡೊಯ್ದಿದ್ದಾರೆ.

ಬುಕ್ಕಾಪಟ್ಟಣ ಆರೋಗ್ಯ ವೈದ್ಯಾಧಿಕಾರಿ ಮಾಲತಿ ಮಾತನಾಡಿ, ುಂಗಳವಾರ ಬೆಳಗ್ಗೆಯಿಂದಲೇ ವಾಂತಿ ಭೇದಿ ಹೊಟ್ಟೆ ನೋವುಗಳ ಕಾರಣ ನೀಡಿ ಸುಮಾರು 25ಕ್ಕೂ ಹೆಚ್ಚು ಜನ ಚಿಕಿತ್ಸೆಗೆ ಹೊರರೋಗಿಗಳಾಗಿ ಬಂದಿದ್ದರು. ಇವರೆಲ್ಲರಿಗೂ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಗುಣಮುಖರಾಗಿದ್ದಾರೆ. ಈ ಎಲ್ಲರೂ ನೀಡಿದ ಮಾಹಿತಿ ಮೇರೆಗೆ ಪಾನಿಪುರಿ ಅಂಗಡಿಯ ಮಾಲೀಕರಿಗೆ ನೋಟಿಸ್​ ನೀಡಿದ್ದು, ಆಹಾರದ ಸ್ಯಾಂಪಲ್​ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷೆಯ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಆಹಾರ ಮತ್ತು ಗುಣಮಟ್ಟ ಅಧಿಕಾರಿ ಚಂದ್ರಪ್ಪ ಮಾತನಾಡಿ, ರಾಜಸ್ಥಾನ ಮೂಲದ ಮುಖೇಶ್​ ಎಂಬಾತನಿಗೆ ಈಗಾಗಲೇ 1 ಬಾರಿ ನೋಟಿಸ್​ ನೀಡಿದರು ಸಹ ಪದೇಪದೆ ಈ ವ್ಯಕ್ತಿ ಮೇಲೆ ಇದೇ ರೀತಿಯ ಪ್ರಕರಣ ದಾಖಲಾಗಿದೆ. ಪರೀಕ್ಷೆಯ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.