ರಾಮನಗರ: ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ಸಾಕ್ಷಿಯಾಗಲು ರೇಷ್ಮೆ ನಗರಿ ರಾಮನಗರ ಸಜ್ಜಾಗಿ ನಿಂತಿದೆ.
ಕೋವಿಡ್‌ನಿಂದಾಗಿ ಜ.13ಕ್ಕೆ ಅಂತ್ಯ ಕಂಡಿದ್ದ ಪಾದಯಾತ್ರೆ ಎರಡನೇ ಹಂತದಲ್ಲಿ ಮುಂದುವರಿಯುತ್ತಿದ್ದು, ರಾಮನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಒಟ್ಟಾರೆ 140 ಕಿ.ಮೀ. ಸಾಗುವ ಪಾದಯಾತ್ರೆಯ ಮೊದಲ ಹಂತದಲ್ಲಿ ಕಾಂಗ್ರೆಸ್ ನಾಯಕರು 65 ಕಿಮೀ ನಡಿಗೆಯನ್ನು ಜ.12ರ ಸಂಜೆಗೆ ಪೂರ್ಣಗೊಳಿಸಿದ್ದರು. ಸರ್ಕಾರ ಪಾದಯಾತ್ರೆಗೆ ಅವಕಾಶ ನೀಡದ ಕಾರಣ ಜ.13ರಂದು ಅಂತ್ಯ ಕಂಡಿತ್ತು. ಭಾನುವಾರ ಮತ್ತೆ ಪಾದಯಾತ್ರೆಗೆ ಚಾಲನೆ ದೊರೆಯಲಿದ್ದು, ಕಾಂಗ್ರೆಸ್‌ನ ಕೇಂದ್ರ ಮತ್ತು ರಾಜ್ಯದ ನಾಯಕರು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಮಾ.4ರಂದು ಬಜೆಟ್ ಅಧಿವೇಶನ ನಡೆಯುವ ಕಾರಣ ಬೆಂಗಳೂರಿನಲ್ಲಿ ನಡೆಯಬೇಕಿದ್ದ 4 ದಿನಗಳ ಪಾದಯಾತ್ರೆಯನ್ನು 3 ದಿನಗಳಿಗೆ ಸೀಮಿತಗೊಳಿಸಿದ್ದು, ರಾಮನಗರದಿಂದ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನಕ್ಕೆ ಒಟ್ಟಾರೆ 80 ಕಿ.ಮೀ. ದೂರವನ್ನು 5 ದಿನಗಳಲ್ಲಿ ಕ್ರಮಿಸಲಿದೆ.
ಫೆ.27ರ ಭಾನುವಾರ ರಾಮನಗರದ ಟಿ.ಆರ್.ಮಿಲ್ ಆವರಣದಿಂದ ಮೇಕೆದಾಟು 2.0 ಪಾದಯಾತ್ರೆಗೆ ಚಾಲನೆ ದೊರೆಯಲಿದೆ. ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮತ್ತು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಇದಕ್ಕೂ ಮುನ್ನ ರಾಮನಗರ ನಗರದ ಅಧಿದೇವತೆ ಚಾಮುಂಡೇಶ್ವರಿ ದೇವಾಲಯದಲ್ಲಿ ನಾಯಕರು ವಿಶೇಷ ಪೂಜೆ ಸಲ್ಲಿಸಲಿದ್ದು, ನಂತರ ಪೀರನ್ ಷಾವಲಿ ಷಾ ದರ್ಗಾಕ್ಕೆ ಭೇಟಿ ನೀಡಿ ಪಾರ್ಥನೆ ಸಲ್ಲಿಸಲಿದ್ದಾರೆ. ಎಲ್ಲ ಮುಖಂಡರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲು ಸ್ಥಳೀಯ ಮುಖಂಡರು ಸಿದ್ಧತೆ ನಡೆಸಿದ್ದಾರೆ.
ಪಾದಯಾತ್ರೆಗಿಲ್ಲ ಅನುಮತಿ: ಸಂಗಮದಿಂದ-ಬೆಂಗಳೂರುವರೆಗೆ ಹಮ್ಮಿಕೊಂಡಿದ್ದ ಮೊದಲ ಹಂತದ ಪಾದಯಾತ್ರೆಗೆ ಕಾಂಗ್ರೆಸ್, ಜಿಲ್ಲಾಡಳಿತದಿಂದ ಅನುಮತಿ ಪಡೆದಿರಲಿಲ್ಲ. ಇದೀಗ 2ನೇ ಹಂತದ ಪಾದಯಾತ್ರೆಗೆ ಅನುಮತಿ ಕೋರಿದ್ದರೂ ಕೋವಿಡ್ ನಿಯಮಗಳು ಇನ್ನು ರಾಜ್ಯದಲ್ಲಿ ಜಾರಿಯಲ್ಲಿರುವ ಕಾರಣ ಜಿಲ್ಲಾಡಳಿತ ಪಾದಯಾತ್ರೆಗೆ ಅನುಮತಿ ನೀಡಿಲ್ಲ ಎಂದು ತಿಳಿದು ಬಂದಿದೆ. ಒಂದು ವೇಳೆ ನಿಯಮ ಮೀರಿ ಪಾದಯಾತ್ರೆ ಕೈಗೊಂಡರೆ ಪ್ರಕರಣ ದಾಖಲು ಮಾಡಲು ಜಿಲ್ಲಾಡಳಿತ ಸಿದ್ಧವಾಗಿದೆ. ಮತ್ತೊಂದೆಡೆ ಕಾಂಗ್ರೆಸ್ ಸಹ ಮತ್ತೊಂದು ಪ್ರಕರಣ ದಾಖಲು ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ಅಂಜಿಕೆ ವ್ಯಕ್ತಪಡಿಸದೆ ಪಾದಯಾತ್ರೆ ಮುಂದುವರಿಸಲು ಅಡಿಯಿಟ್ಟಿದೆ.
ಸಿಂಗಾರಗೊಂಡ ರಾಮನಗರ: ಪಾದಯಾತ್ರೆಗಾಗಿ ರಾಮನಗರದ ರಸ್ತೆ ಬದಿಯ ಕಟ್ಟಡಗಳಿಗೆ ವಿದ್ಯುತ್ ದೀಪಗಳ ಅಲಂಕಾರ, ಬಾಳೆಕಂದು ಕಟ್ಟಲಾಗುತ್ತಿದೆ. ನಾಯಕರಿಗೆ ಸ್ವಾಗತ ಕೋರುವ ಫೆಕ್ಸ್ ಗಳು ರಾರಾಜಿಸುತ್ತಿವೆ. ‘ನಮ್ಮ ನೀರು ನಮ್ಮ ಹಕ್ಕು’ ಎಂಬ ಘೋಷವಾಕ್ಯದೊಂದಿಗೆ ಬಲೂನ್‌ಗಳು ಹಾರಾಡುತ್ತಿವೆ. ಪ್ರತಿನಿತ್ಯ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ 9 ಕಿ.ಮೀ. ಹಾಗೂ ಮಧ್ಯಾಹ್ನದಿಂದ 6 ಕಿ.ಮೀ ಸೇರಿ ಒಟ್ಟು 15 ಕಿ.ಮೀ. ಪಾದಯಾತ್ರೆ ನಡೆಯಲಿದೆ. ಪ್ರತಿ 9 ಕಿ.ಮೀ. ದೂರದಲ್ಲಿ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗುತ್ತಿದ್ದು, ಇದಕ್ಕಾಗಿ ಶಾಮಿಯಾನ ಹಾಕಿ ಸಿದ್ಧತೆಗಳು ನಡೆದಿವೆ.
ಪಾದಯಾತ್ರೆಯಲ್ಲಿ ಪ್ರತಿದಿನ 25ರಿಂದ 30 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹೆಜ್ಜೆ ಹೆಜ್ಜೆಗೂ ಕುಡಿಯುವ ನೀರು, ತಂಪು ಪಾನೀಯ, ಪಾನಕ, ಮಜ್ಜಿಗೆ , ಬಿಸ್ಕೆಟ್, ಹಣ್ಣು ಹಂಪಲು ನೀಡಲು ಪ್ರತ್ಯೇಕ ಸಮಿತಿಗಳನ್ನು ರಚನೆ ಮಾಡಲಾಗಿದೆ. ಅಲ್ಲದೆ, ಮಾರ್ಗದಲ್ಲಿ ಬರುವ ಗ್ರಾಮಗಳಲ್ಲಿನ ಮುಖಂಡರಿಗೂ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.
ಬಿಡದಿಯಲ್ಲಿ ವಾಸ್ತವ್ಯ
ಮೊದಲ ದಿನದ ಪಾದಯಾತ್ರೆ ಬಿಡದಿಯಲ್ಲಿ ಸಂಪನ್ನವಾಗಲಿದ್ದು, ಇಲ್ಲಿ ವಂಡರ್‌ಲಾ, ಈಗಲ್‌ಟನ್, ಮ್ಯಾಗ್ನೋಲಿಯಾ ರೆಸಾರ್ಟ್‌ಗಳಲ್ಲಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಡೆತನದ ಐಕಾನ್ ಕಾಲೇಜು, ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಒಡೆತನದ ಜೆವಿಐಟಿ ಕಾಲೇಜಿನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಎರಡನೇ ದಿನದ ಪಾದಯಾತ್ರೆ ಬಿಡದಿಯಿಂದ ಹೊರಟು ಸೋಮವಾರ ಸಂಜೆ ಹೊತ್ತಿಗೆ ಕೆಂಗೇರಿ ತಲುಪಲಿದೆ.
ಹೆದ್ದಾರಿ ಮಾರ್ಗ ಬದಲಾವಣೆ: ಪಾದಯಾತ್ರೆಯು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವ ಹಿನ್ನಲೆಯಲ್ಲಿ 2 ದಿನ ಹೆದ್ದಾರಿ ಸಂಚಾರಕ್ಕೆ ಬದಲಿ ಮಾರ್ಗ ಬಳಸಬೇಕಿದೆ. ಮಂಡ್ಯ ಕಡೆಯಿಂದ ಬರುವವರು ಮದ್ದೂರಿನಿಂದ ಕುಣಿಗಲ್ ಮಾರ್ಗವಾಗಿ ಬೆಂಗಳೂರು ತಲುಪಬೇಕಿದೆ. ಮೈಸೂರು, ಮಡಿಕೇರಿ ಜಿಲ್ಲೆಯವರು, ಹಾಸನ ಹೆದ್ದಾರಿ ಬಳಸಬೇಕಿದೆ. ಇಲ್ಲ ಮದ್ದೂರಿನಿಂದ ಕನಕಪುರ ಮಾರ್ಗವಾಗಿ ಬೆಂಗಳೂರು ಸೇರಬೇಕು. ಸ್ಥಳೀಯವಾಗಿ ಓಡಾಡುವವರು ಹೆದ್ದಾರಿ ಬಿಟ್ಟು ಗ್ರಾಮೀಣ ರಸ್ತೆಗಳನ್ನು ಅವಲಂಬಿಸಬೇಕು. ಪಾದಯಾತ್ರೆ ಬಿಡದಿ ಸೇರಿದ ಬಳಿಕ ರಾಮನಗರದವರೆಗೂ ಹೆದ್ದಾರಿ ಮುಕ್ತವಾಗಲಿದೆ. ಬೈರಮಂಗಲ ಕ್ರಾಸ್‌ನಿಂದ ಬಲಕ್ಕೆ ತಿರುಗಿ ಹಾರೋಹಳ್ಳಿ ಮಾರ್ಗವಾಗಿ ಬೆಂಗಳೂರು-ಮೈಸೂರು ತಲುಪಬಹುದು. ಬೈರಮಂಗಲ ಕ್ರಾಸ್‌ನಿಂದ ಮುಂದಕ್ಕೆ ಯಾವುದೇ ಬದಲಿ ರಸ್ತೆಗಳಿಲ್ಲ. ಹೀಗಾಗಿ ಪಾದಯಾತ್ರೆ ನೈಸ್ ರಸ್ತೆ ತಲುಪುವವರೆಗೂ ಈ ರಸ್ತೆ ಸಂಪೂರ್ಣ ಸ್ಥಗಿತಗೊಳ್ಳಲಿದೆ.
ಬಂದೋಬಸ್ತ್: ವಾಹನ ಸವಾರರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಜಿಲ್ಲೆಯ ಗಡಿ ಹಾಗೂ ಪ್ರಮುಖ ವೃತ್ತಗಳಲ್ಲಿ ಚೆಕ್‌ಪೋಸ್ಟ್ ಗಳನ್ನು ನಿರ್ಮಿಸಿ ಪೊಲೀಸರು ಬಂದೋಬಸ್ತಿನಲ್ಲಿ ತೊಡಗಿದ್ದಾರೆ. ರಾಮನಗರ ಜಿಲ್ಲೆಯ ಗಡಿ ಭಾಗ ಚನ್ನಪಟ್ಟಣ-ಮದ್ದೂರು ಸಂಪರ್ಕ ಕಲ್ಪಿಸುವ ಗಡಿ ಸೇರಿ ಚನ್ನಪಟ್ಟಣ ಹಾಗೂ ರಾಮನಗರ ಮಾರ್ಗಮಧ್ಯೆ ಪ್ರಮುಖ ವೃತ್ತಗಳಲ್ಲಿ ಪೊಲೀಸರು ಚೆಕ್‌ಪೋಸ್ಟ್ ನಿರ್ಮಿಸಿದ್ದು, ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕಾಗಿದೆ.
ಪಾದಯಾತ್ರೆಯ ಬಂದೋಬಸ್ತಿನ ಕಾರ್ಯಕ್ಕೆ ಐಜಿ, ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಕೋಲಾರ ಜಿಲ್ಲೆಯ ಎಎಸ್‌ಪಿಗಳು, 14 ಕೆಎಸ್‌ಆರ್‌ಪಿ ತುಕಡಿ ಹಾಗೂ 1200 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ರೂಟ್ ಮ್ಯಾಪ್ ಮೊದಲ ದಿನ- ರಾಮನಗರದಿಂದ ಬಿಡದಿ- 15ಕಿ.ಮೀ 2ನೇ ದಿನ - ಬಿಡದಿಯಿಂದ ಕೆಂಗೇರಿಯ ಪೂರ್ಣಿಮಾ ಕನ್ವೆನ್ಷನ್ ಸೆಂಟರ್ - 20.5 ಕಿ.ಮೀ. 3ನೇ ದಿನ - ಕೆಂಗೇರಿಯಿಂದ ಔಟರ್ ರಿಂಗ್ ರಸ್ತೆಯ ಅಧ್ವೆ ತ್ ಪೆಟ್ರೋಲ್ ಬಂಕ್ - 15.8 ಕಿ.ಮೀ. 4ನೇ ದಿನ - ಔಟರ್ ರಿಂಗ್ ರಸ್ತೆಯ ಅಧ್ವೈತ್ ಪೆಟ್ರೋಲ್ ಬಂಕ್‌ನಿಂದ ಮೇಕ್ರಿ ಸರ್ಕಲ್ - 16.7 ಕಿ.ಮೀ. 5ನೇ ದಿನ - ಮೇಕ್ರಿ ಸರ್ಕಲ್‌ನಿಂದ ನ್ಯಾಷನಲ್ ಕಾಲೇಜು ಮೈದಾನ - 11.8 ಕಿ.ಮೀ
ಕಾಂಗ್ರೆಸ್‌ನಿಂದ ಪಾದಯಾತ್ರೆಗೆ ಅನುಮತಿ ಕೇಳಿರಲಿಲ್ಲ. ಕಾರ‌್ಯಕ್ರಮವನ್ನು ಗಮನಕ್ಕೆ ತಂದಿದ್ದರು ಅಷ್ಟೆ.ಫೆಬ್ರವರಿ ಅಂತ್ಯದವರೆಗೂ ಕೋವಿಡ್ ನಿಯಮಗಳಿರುವುದರಿಂದ ರ‌್ಯಾಲಿ, ಸಮಾವೇಶಗಳಿಗೆ ಅವಕಾಶ ನೀಡುವಂತಿಲ್ಲ. ಕಾಂಗ್ರೆಸ್ ಪಾದಯಾತ್ರೆಗೆ ಜಿಲ್ಲಾಡಳಿತ ಅವಕಾಶ ನೀಡಿಲ್ಲ. ನಿಯಮ ಮೀರಿ ಪಾದಯಾತ್ರೆ ನಡೆಸಿದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು. ಡಾ. ಕೆ. ರಾಕೇಶ್ ಕುಮಾರ್, ಜಿಲ್ಲಾಧಿಕಾರಿ ರಾಮನಗರ