ಜಿಲ್ಲೆ

ಪಾದಚಾರಿಗೆ ಬೈಕ್ ಡಿಕ್ಕಿಯಾಗಿ ವ್ಯಕ್ತಿ ಸಾವು

ಹಾಸನ: ಕಾರೇಹಳ್ಳಿ-ತಿಪಟೂರು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ವೇಗವಾಗಿ ಬಂದ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಮಂಗಳವಾರ ರಾತ್ರಿ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಚನ್ನರಾಯಪಟ್ಟಣ ತಾಲೂಕು ಬಾಗೂರು ಹೋಬಳಿಯ ಕಾರೆಹಳ್ಳಿ ಗ್ರಾಮದ ನಾಗರಾಜು (55) ಮೃತ ರೈತ.

ಮಂಗಳವಾರ ರಾತ್ರಿ ಮನೆಗೆ ಸಾಮಾನು ತೆಗೆದುಕೊಂಡು ರಾತ್ರಿ 8 ಗಂಟೆ ಸಮಯದಲ್ಲಿ ನಾಗರಾಜು ಕಾರೇಹಳ್ಳಿ-ತಿಪಟೂರು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ತಿಪಟೂರು ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದ ಪರದೇಶಿಗೌಡ ನುಗ್ಗೇಹಳ್ಳಿ ಕಡೆಯಿಂದ ತಿಪಟೂರು ಕಡೆಗೆ ವೇಗವಾಗಿ ಬೈಕ್ ಓಡಿಸಿಕೊಂಡು ಬಂದು ನಾಗರಾಜು ಅವರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ರಸ್ತೆಯ ಮೇಲೆ ಬಿದ್ದ ನಾಗರಾಜು ತಲೆಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈ ವೇಳೆ ಪರೀಕ್ಷಿಸಿದ ವೈದ್ಯರು ನಾಗರಾಜು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅಪಘಾತ ಮಾಡಿದ ಬೈಕ್ ಚಾಲಕನ ವಿರುದ್ಧ ಕಾನೂನು ಕ್ರಮ ಮೃತರ ಪುತ್ರ ಭೈರೇಗೌಡ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.