ಹಾಸನ: ಹೊಳೇನರಸೀಪುರ ತಾಲೂಕಿನ ಪಡುವಲಿಪ್ಪೆ ಗ್ರಾಮದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಬಸ್ ಚಕ್ರ ಆತನ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದ ನಿವಾಸಿ ಮಹೇಶ (28) ಮೃತ ವ್ಯಕ್ತಿ.
ಗದಗ ಜಿಲ್ಲೆಯಿಂದ ಗಾರೆ ಕೆಲಸ ಅರಸಿಕೊಂಡು ಫೆ.15ರಂದು ಹಾಸನಕ್ಕೆ ಬಂದು, ಹೊಳೆನರಸೀಪುರ ತಾಲೂಕಿನ ಅಂಕಪುರ ಗ್ರಾಮದಲ್ಲಿ ನೆಲೆಸಿದ್ದ ತಮ್ಮ ಗ್ರಾಮದ ಸಮೀಪದ ತಂಡದೊಂದಿಗೆ ಉಳಿದುಕೊಂಡಿದ್ದರು. ಫೆ.19ರ ಸೋಮವಾರ ಕೆಲಸಕ್ಕೆ ರಜೆ ಇದ್ದುದ್ದರಿಂದ ಪಡುವಲಹಿಪ್ಪೆ ಗ್ರಾಮದಲ್ಲಿ ಗಾರೆ ಕೆಲಸ ಏನಾದರೂ ಇದ್ದರೆ ಕೇಳೋಣವೆಂದು ಮೇಸ್ತ್ರಿ ಕೃಷ್ಣಪ್ಪ ಅಗಸೀಕೆರೆ ಅವರೊಂದಿಗೆ ಮಹೇಶ ಹೋಗಿದ್ದರು. ಮಧ್ಯಾಹ್ನ ಸುಮಾರು 1 ಗಂಟೆ ಸಮಯದಲ್ಲಿ ಪಡುವಲಹಿಪ್ಪೆ ಗ್ರಾಮಕ್ಕೆ ಬಂದು ಅಲ್ಲಿಯೇ ಊಟ ಮಾಡಿಕೊಂಡು, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹೊಳೆನರಸೀಪುರ ಕಡೆಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮಹೇಶಗೆ ಡಿಕ್ಕಿ ಹೊಡೆದಿದ್ದಾರೆ. ಆಗ ರಸ್ತೆಯ ಮೇಲೆ ಬಿದ್ದ ಮಹೇಶನ ಎದೆಯ ಮೇಲೆ ಬಸ್ಸಿನ ಹಿಂಬದಿಯ ಚಕ್ರ ಹರಿದಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತ ಮಾಡಿದ ಬಸ್ಸಿನ ಚಾಲಕ ಬಸ್ ಅನ್ನು ನಿಲ್ಲಿಸದೆ ಹೋಗಿದ್ದಾನೆ. ಅಪಘಾತಕ್ಕೆ ಕಾರಣವಾದ ಬಸ್ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮೇಸ್ತ್ರಿ ಕೃಷ್ಣಪ್ಪ ಅಗಸೀಕೆರೆ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.